ನೇರದಾರಿ

ಈ ಜೀವನ ಎಂಬ ಪ್ರಯಾಣದಲ್ಲಿ ನಾವು ಸಂಧಿಸುವ ವ್ಯಕ್ತಿಗಳು ಆಕಸ್ಮಿಕ,ಅಗಲಿಕೆ ಅನಿವಾರ್ಯ, ಹಾಗೆಯೇ ಅವರವರ ನಿಲ್ದಾಣ ಬಂದ ಕೂಡಲೇ ಇಳಿಯಲೇ ಬೇಕು.ಕೆಲವರು ದೀರ್ಘ ಪ್ರಯಾಣ ಮಾಡಬಹುದು.ಇನ್ನು ಕೆಲವರು ಸಮೀಪ ಪ್ರಯಾಣದಲ್ಲಿರಬಹುದು.ನಾವೀಗ ಈ ಪ್ರಯಾಣದ ಯಾವ ಸ್ಟೇಜ್ ನಲ್ಲಿದ್ದೇವೆಂದು ಬಲ್ಲವನು ಒಬ್ಬನೇ (ಅಲ್ಲಾಹ್)ಅವನೇ ನಮ್ಮೆಲ್ಲರ ಸರ್ವ ಪಾಲಕ.ಅವನಲ್ಲದೆ ಬೇರೆ ಆರಾಧ್ಯನಿಲ್ಲ.ಅಲ್ಲಾಹ್ ನಮ್ಮೆಲ್ಲರ ಕೊನೆಯ ಪಯಣವನ್ನು ಸುಗಮ ಗೊಳಿಸಿ, ನಮ್ಮೆಲ್ಲರನ್ನು ಜನ್ನತುಲ್ ಫಿರ್ದೌಸ್ ನಲ್ಲಿ ಒಂದು ಗೂಡಿಸಲಿ

 
>
 • ಹದೀಸ್ ಗ್ರಂಥಗಳಿಂದ
  ಮುಆವಿಯಾ(ರ)ರಿಂದ ವರದಿ: ಪ್ರವಾದಿ(ಸ) ಹೇಳಿದರು: ಅಲ್ಲಾಹನು ಯಾರಿಗಾದರೂ ಒಳಿತನ್ನು ಬಯಸಿದರೆ ಅವನು ಆತನಿಗೆ ಧಾರ್ಮಿಕ ಜ್ಞಾನವನ್ನು ನೀಡುತ್ತಾನೆ. (ಬುಖಾರಿ ಮತ್ತು ಮುಸ್ಲಿಮ್)
  ಸೂರಃ ಆಲು ಇಮ್ರಾನ್ 3:110
  ನೀವು (ನಾವು ಮುಸ್ಲಿಮರು) ಮನುಷ್ಯರಿಗಾಗಿ ಹೊರತರಲ್ಪಟ್ಟ ಉತ್ತಮ ಸಮುದಾಯವಾಗಿರುವಿರಿ. ಇಸ್ಲಾಮ್ ಆದೇಶಿಸಿದ ಎಲ್ಲವನ್ನೂ ನೀವು ಮಾಡುತ್ತೀರಿ ಮತ್ತು ಇಸ್ಲಾಮ್ ವಿರೋಧಿಸಿದ ಎಲ್ಲದರಿಂದಲೂ ನೀವು ದೂರವುಳಿಯುವಿರಿ. ಮತ್ತು ನೀವು ಅಲ್ಲಾಹನಲ್ಲಿ ವಿಶ್ವಾಸವಿರಿಸುವಿರಿ. ಗ್ರಂಥ ನೀಡಲ್ಪಟ್ಟ ಜನರು (ಯಹೂದ ಮತ್ತು ಕ್ರೈಸ್ತರು) ವಿಶ್ವಾಸವಿರಿಸುತ್ತಿದ್ದರೆ, ಅದು ಅವರಿಗೆ ಒಳಿತಾಗಿರುತ್ತಿತ್ತು. ಅವರಲ್ಲಿ ಕೆಲವರಿಗೆ ವಿಶ್ವಾಸವಿದೆ. ಆದರೆ ಅವರಲ್ಲಿ ಹೆಚ್ಚಿನವರೂ ಫಾಸಿಕೂನ್ (ಅಲ್ಲಾಹನಿಗೆ ಅವಿಧೇಯರೂ, ಅಲ್ಲಾಹನ ಆಜ್ಞೆಗಳನ್ನು ಧಿಕ್ಕರಿಸುವವರೂ ಆಗಿದ್ದಾರೆ).
  ಇಣುಕಿ ಹೋದವರು

  satyasandesha
  ಈಗ ನೋಡುತ್ತಿರುವವರು
  ವೀಕ್ಷಣಾಗಾರರ ಸ್ಥಳ
  Locations of visitors to this page
  ಇಷ್ಟರವರೆಗೆ ಬರೆದದ್ದು
  ಆಕ್ಸಿಡೆಂಟ್
  Saturday, June 13, 2009
  ಟ್ರಿನ್ ಟ್ರಿನ್...... ಟ್ರಿನ್ ಟ್ರಿನ್ ........ಪೋನ್ ಜೋರಾಗಿ ರಿಂಗನಿಸುತಿತ್ತು. ಉಮ್ಮ ಅಡುಗೆ ಕೋಣೆಯಿಂದ ಧ್ವನಿ ಎತ್ತರಿಸಿ ಹೇಳುತ್ತಿದ್ದರು. "ಪೋನ್ ತೆಗೆಯೇ ಸಾಕಿರಾ... ಆವಾಗಿನಿಂದ ಫೋನ್ ರಿಂಗನಿಸುತ್ತಿದೆ ಯಾರದೋ ಏನೋ, ಏನಾದರೂ ಅರ್ಜೆಂಟ್ ವಿಷಯ ವಿದ್ದಿರಬಹುದು, ನೋಡ್ಕೋ ಹೋಗು", ಉಮ್ಮನ ಧ್ವನಿಯೂ ಪೋನಿನ ಕಿರಿಕಿರಿಯೂ ತಾಳಲಾರದೆ ನಾನು ರಿಸೀವರ್ ಎತ್ತಿದೆ. ಅತ್ತಲಿನಿಂದ ರಿಯಾಝ್ ನ ಧ್ವನಿ ಕೇಳಿಸುತಿತ್ತು. "ಹಲೋ ಸಾಕಿರ... ನಾಳೆ ಯಾಕೆ ಮೀಟಿಂಗಿಟ್ಟದ್ದು? ಹಣ ಸಿಕ್ಕುತ್ತೆ ತಾನೆ? ಇಲ್ಲದಿದ್ದರೆ ನೀನು ಅಲ್ಲಿಯೇ ನಿನ್ನುಮ್ಮನ ಮನೆಯಲ್ಲಿಯೇ ಕುಳಿತಿರಬೇಕೆಂದು ನೆನಪಿದೆಯಲ್ವಾ? ಏನು ಹೇಳುತ್ತರೆ ನಿನ್ನ ಬಾಪ ....? ಹಣ ರೆಡಿಯಾಯಿತಾ"? ರಿಯಾಝ್ ನ ಒಂದೇ ಸಮನೆ ಪ್ರಶ್ನೆಗಳನ್ನು ಕೇಳಿ ನಾನು ಕೋಪದಿಂದ ಅವಡುಗಚ್ಚಿದ್ದೆ.. "ಬಾಪಾನ ರಕ್ತ ಮಾಂಸವೆಲ್ಲಾ ನನ್ನ ಮದುವೆ ಸಮಯದಲ್ಲಿ ಬತ್ತಿ ಹೋಗಿದೆ.ಇನ್ನುಳಿದಿರುವುದು ಅವರ ದೇಹದಲ್ಲಿ ಬಳಲಿ ಬೆಂಡಾಗಿರುವ ಸಣಕಲು ಮೂಳೆ ಮಾತ್ರ , ಅದರಲ್ಲೂ ಚೆಂಡಾಡುವ ಬಯಕೆಯೇ ನಿಮಗೆ...? ಏನೇ ಮಾಡಿದರೂ ಹಣ ಮಾತ್ರ ಸಿಕ್ಕೋಲ್ಲ ಅದು ಗ್ಯಾರಂಟಿ" ಕೋಪದಿಂದ ಹೇಳಿದೆ. ಆತ ಅಷ್ಟೇ ಸಿಟ್ಟಿನಿಂದ " ಏಯ್ ಅಹಂಕಾರಿ ಹೆಣ್ಣೇ....,ಹಣ ತರದಿದ್ದರೆ ನೀನಿಲ್ಲಿಗೆ ಬರಲೇ ಬೇಡ ಅಲ್ಲೇ ಬಿದ್ಕೋ.."ಎಂದು ಪೋನ್ ಕುಕ್ಕಿದ.ಅವನು ಪೋನ್ ಇಟ್ಟ ಸದ್ದು ಕೇಳಿ ನಾನು ಮೆಲ್ಲನೆ ರಿಸೀವರನ್ನು ಯಥಾ ಸ್ಥಾನಕ್ಕೆ ಇಟ್ಟು ಹಿಂದುರುಗಿದೆ. ತಂದೆ ಪ್ರಶ್ನಾರ್ಥಕವಾಗಿ ನನ್ನನ್ನೇ ನೋಡುತ್ತಿದ್ದರು. ನನ್ನ ಮಾತನ್ನು ಕೇಳಿಸಿ ಕೊಂಡಿದ್ದರೆಂದು ಅವರ ಮುಖವನ್ನು ನೋಡಿದ ಕೂಡಲೇ ಅರಿವಾಯಿತು ನನಗೆ.ನನ್ನ ಮುಖವನ್ನೇ ದಿಟ್ಟಿಸುತ್ತಾ, ತಂದೆ.. "ನಮ್ಮ ಮರ್ಯಾದೆಯನ್ನೆಲ್ಲಾ ಹರಾಜಿಗಿಟ್ಟ ಅವ.. ಹೇಗಾದರೂ ಮಾಡಿ ಕೊಡ ಬೇಕಲ್ಲಮ್ಮಾ ಅವನಿಗೆ ಹಣ.. "ಎಂದು ದೀರ್ಘವಾಗಿ ನಿಟ್ಟುಸಿರಿಡುತ್ತಾ , ಭಾರವಾದ ಧ್ವನಿಯಲ್ಲಿ ಹೇಳುತ್ತಿದ್ದರು. ಈ ಹೇಗಾದರೂ ಎಂಬ ಪದ ಬಾಪಾ ಬ್ಯಾಂಕಿನ ಲೋನನ್ನೇ ನೆಚ್ಚಿ ನುಡಿದದ್ದುಎಂದು ನನಗೆ ಅರಿವಿತ್ತು, ಅದು ಬಿಟ್ಟು ಬೇರೆ ದಾರಿಯೂ ಅವರಿಗಿಲ್ಲ ಎಂಬುವುದೂ ಅರಿವಿತ್ತು. ತುಂಬಿದ ಕಣ್ಣುಗಳೊಡನೆ ಬಾಪಾನನ್ನೇ ದಿಟ್ಟಿಸುತ್ತಿದ್ದೆ.ಉಮ್ಮ ಸಮಾಧಾನ ಹೇಳುತ್ತಿದ್ದರು. "ನಿನ್ನ ಬದುಕು ಬೆಳಗಲು ಏನಾದರೂ ಮಾಡ್ಕೊಳ್ಳಲೇ ಬೇಕಲ್ಲಮ್ಮಾ.. ಸುಮ್ನೆ ಅಳುವುದು ಯಾಕೆ? ನನ್ನ ಬದುಕು ಬೆಳಗಲು ಬಾಪಾ ಸ್ವತ ಉರಿದು ಬೂದಿಯಾಗ ಬೇಕಾ ಉಮ್ಮಾ....."? ಎಂಬ ಪ್ರಶ್ನೆಯನ್ನು ಕೇಳಲಾಗದೆ ಮೌನವಾಗಿ ಕಂಬನಿ ಮಿಡಿಯುತ್ತಾ ಮನೆಯಿಂದ ಹೊರಗೆ ಕಾಲಿಕ್ಕಿದೆ.

  ಕಾಲುಗಳು ಸಮೀಪದಲ್ಲಿರುವ ನೀರಿನ ಅಲೆಗಳತ್ತ ಹೆಜ್ಜೆ ಹಾಕ ತೊಡಗಿದವು.ಎದುರಿಗೆ ನೆತ್ತರಿನಂತೆ ಉಕ್ಕುವ ಸಂಜೆಗಡಲು, ದಡವನ್ನಪ್ಪಳಿಸಲು ಪಣ ತೊಟ್ಟು ಒಡೋಡಿ ಬರುವ ತೆರೆಗಳು , ದಡ ಸೇರಿದಾಗ ನೊರೆಯನ್ನಷ್ಟೇ ಕಾರಿ ಹಿಂದಕ್ಕೋಡುವ ಅವುಗಳ ನಿರ್ವೀಯತೆ ನನ್ನದೇ ಎಂದೆನಿಸುತಿತ್ತು. ನಾನು ಅವುಗಳನ್ನೇ ನಿರ್ವೀಕಾರಳಾಗಿ ನೋಡುತ್ತಾ ಕುಳಿತಿದ್ದೆ. ಒಡಲಲ್ಲಿ ಬೆಂಕಿಯ ಕೆಂಡ ಉರಿಯುತಿತ್ತು. ಬದುಕ ಬಂಜರು ಬಯಲಲ್ಲಿ ನಾನಿನ್ನು ಒಂಟಿ ಕಲ್ಲಿನಂತಾಗುವೆನೇ? ಎಂದು ನೆನೆದೇ ಭಯ ಹುಟ್ಟುತಿತ್ತು ನನಗೆ...ನೋವಿನ ತೀವ್ರತೆ ಸಹಿಸಲಾರದೆ ದುಃಖ ಹುಚ್ಚೆದ್ದು ಕುಣಿಯುತಿತ್ತು.ಮನದಲ್ಲಿ ಸಂಕಟ ತಾಂಡವಾಡುತಿತ್ತು. ಮೌನ ಮಡುಗಟ್ಟಿತ್ತು. ರಿಯಾಝ್ ನನ್ನ ಪಾಲಿಗೆ ಕೇವಲ ನೆನಪು ಮಾತ್ರ ಆಗ್ಬಾರದು, ಬಾಳಿನ ಉದ್ದಗಲಕ್ಕೂ ಬದುಕೋ ಕ್ಷಣಗಳಾಗಬೇಕೆಂದು ಅಶಿಸಿದ್ದೆ. ನನ್ನ ಜೀವನದಲ್ಲಿ ನಾನಿಡುವ ಪ್ರತೀ ಯೊಂದು ಹೆಜ್ಜೆಯಲ್ಲೂ ಅವನದೊಂದು ಹೆಜ್ಜೆ ಜೊತೆಯಾಗಿರಬೇಕೆಂದು ಬಯಸಿದ್ದೆ. ಆದರೆ ಅವ ಮಾತ್ರ ನನ್ನನ್ನು ಕೇವಲ ಹಣದ ಬಣ್ಣದಲ್ಲಿ ಕಂಡಿದ್ದ. ದಾಂಪತ್ಯದ ಅರ್ಥವನ್ನು ನೋಟುಗಳಲ್ಲಿ ಹುಡುಕ ಹೊರಟಿದ್ದ, ಹಣದ ಥೈಲಿಯನ್ನು ಬಾಚುವ ಹುನ್ನಾರದಲ್ಲಿ ಪ್ರೀತಿ ಪ್ರೇಮಕ್ಕೆ ಕೊಳ್ಳಿ ಇಟ್ಟಿದ್ದ, ಇಂತಹಾ ವ್ಯಕ್ತಿಯನ್ನು ನಾನು ಇನ್ನು ಮೊದಲಿನ ಹಾಗೆ ಪ್ರೀತಿಸಲು ಸಾಧ್ಯವೇ ?ಅಥವಾ ನಮ್ಮ ದಾಂಪತ್ಯ ಇಲ್ಲಿಗೇ ಕೊನೆಗೊಳ್ಳುವಾವೇ? ದೂರದಲ್ಲಿ ಉಕ್ಕುವ ಕಡಲನ್ನು ತಬ್ಬಿ ಕೊಂಡಂತೆ ಕಾಣುವ ದಿಗಂತವನ್ನೇ ದಿಟ್ಟಿಸುತ್ತಾ ಯೋಚಿಸುತ್ತಿದ್ದೆ. ಸಮಸ್ಯೆ ಬಗೆಹರಿಯಲಾರದೆಂತೆನಿಸಿತು ನನಗೆ.

  ಆತನೇನೋ ನನ್ನ ತಂದೆಯಲ್ಲಿ ಹಣ ಉದುರುವ ಮರವಿದೆಯೆಂದು ಕೊಂಡಿದ್ದನೊಏನೋ?ಮದುವೆಯಾಗಿ ಎರಡೇ ತಿಂಗಳಿಗೆ ಕೊಟ್ಟ ಒಂದು ಲಕ್ಷವನ್ನಲ್ಲದೆ ಮತ್ತೆರಡು ಲಕ್ಷದ ಬೇಡಿಕೆ ಇಟ್ಟಿದ್ದ,ಇಂತಹವನಲ್ಲಿ ನಾನು ಮತ್ತೆ ಜೀವನ ನಡೆಸಬೇಕೆ? ಶಿಥಿಲವಾದ ಪ್ರೀತಿಯನ್ನು ತೇಪೆ ಹಚ್ಚಿ ದಿನ ತೂಗಿಸುವುದು ಕಷ್ಟ ವೆಂದೆನಿಸುತಿತ್ತು.ಬಾಪಾ ಹೇಗಾದರೂ ರಿಯಝ್ ನ ಬೇಡಿಕೆ ಪೋರೈಸುವುದಾಗಿ ಹೇಳಿದ್ದರು. ಆದರೆ ನನಗ್ಯಾಕೋ ಕರುಳಲ್ಲಿ ಕತ್ತರಿ ಇಟ್ಟಂತಾಗುತಿತ್ತು.ಮನ ಮಾತ್ರ ಪವಿತ್ರ ಕುರ್ಆನಿನ ೪ ಅಧ್ಯಾಯದ ೪ ನೇ ಶ್ಲೋಕವನ್ನು ಗುನುಗುಟ್ಟುತ್ತಿದ್ದವು."ಸ್ತ್ರೀ ಯರಿಗೆ ವಿವಾಹ ಧನವನ್ನು ಆತ್ಮ ಸಂತೋಷದಿಂದ (ಕಡ್ಡಾಯವೆಂದರಿತು) ಪಾವತಿ ಮಾಡಿರಿ. ಅವರು ತಮ್ಮಿಷ್ಟದಿಂದ ವಿವಾಹ ಧನದ ಒಂದಂಶವನ್ನು ನಿಮಗೆ ಬಿಟ್ಟು ಕೊಟ್ಟರೆ ನೀವು ಅದನ್ನು ಸಂತೋಷದಿಂದ ಅನುಭೋಗಿಸಿ ಕೊಳ್ಳಬಹುದು" ಆದರೆ ಈಗ ನಡೆಯುತ್ತಿರುವುದಾದರೂ ಏನು? ಇಷ್ಟು ಸಿಂಪಲ್ಲಾದ ವಿವಾಹವು ತೀರಾ ಕ್ಲಿಷ್ಟಕರವಾಗಿ ಇದರ ನೇರ ವಿರುದ್ಧವಾಗಿ ನಡೇಯುವುದಾದರೂ ಯಾಕೆ? ತಾನು ಮುಸ್ಲಿಮನೆಂದು ಬೊಗಳೆ ಬಿಡುವ ಪುರುಷ ಸಮಾಜವು ಧರ್ಮ ಸಮ್ಮತವಾಗಿ ವದು ದಕ್ಷಿಣೆ ಕೊಡುವುದರ ಬದಲು, ಹೆಣ್ಣು ಹೆತ್ತವರ ಬಳಿ ವರದಕ್ಷಿಣೆ ಎಂದು ದೋಚುವುದು ಯಾಕೆ? ಇವರೆಲ್ಲ ಯಾವ ಘನಂದಾರಿ ಪುರುಷಾರ್ಥಕ್ಕಾಗಿ ಮುಸ್ಲಿಮ್ ಸಮುದಾಯವನ್ನು ಅಧಪತನಕ್ಕೆ ತಳ್ಳಲು ಹೊರಟಿರುವುದು? ಎಂದು ಮನದಲ್ಲೇ ದೀರ್ಘ ಮಂಥನ ನಡೆಸುತ್ತಿದ್ದೆ. ಚಿಂತಿಸುವುದು ಹೆಚ್ಚಾಗ ತೊಡಗಿದಂತೆ ತಲೆ ನೋವೂ ಜಾಸ್ತಿಯಾಗ ತೊಡಗಿತು. ಎಲ್ಲವನ್ನೂ ಕರುಣಾಮಯಿಯಾದ ರಬ್ಬಿನಲ್ಲಿ ತವಕ್ಕುಲ್ ಮಾಡಿ, ದುಃಖ ವನ್ನು ತಹಬಂದಿಗೆ ತರಲು ಪ್ರಯತ್ನಿಸುತ್ತಾ ಮನೆಯ ಕಡೆ ಹೆಜ್ಜೆ ಹಾಕಿದೆ. ಮನ ನಾಳಿನ ಸಂಧಾನ ಪ್ರಕ್ರಿಯೆಯೆಯು ಸರಿಯಾಗಲೆಂದು ದುವಾ ಮಾಡುತಿತ್ತು.

  ನೆರೆದಿದ್ದ ಜನರ ಮುಂದೆ ಆತ ಒಂದೇ ಸಮನೆ ಹಣಕ್ಕಾಗಿ ಪಟ್ಟು ಹಿಡಿದಿದ್ದ,ಈ ಸಂಧಾನ ಪ್ರಕ್ರಿಯೆ ಯಾಕೋ ಸರಿಯಾಗದ್ದು ಕಾಣಿಸದಿದ್ದಾಗ ನಾನು ವಿಧಿ ಇಲ್ಲದೆ ಅತ್ತ ನಡೆದಿದ್ದೆ. ತುಂಬಿದ ಜನರೆಡೆಯಲ್ಲಿ ನಿಲ್ಲಲು ಮನಸ್ಸು ಅಳುಕಿದರೂ, ಮನಸ್ಸಿಗೆ ಭಂಡ ಧೈರ್ಯ ತಂದು ಕೊಂಡು ಗಟ್ಟಿಯಾಗಿ ನಿಂತು ಅವನೊಡನೆ ಮೆಲ್ಲನೆ ಧ್ವನಿ ಬಿಚ್ಚ ತೊಡಗಿದೆ......"ಬಾಪಾ ನನ್ನ ಬಾಳು ಬೆಳಗಳು ನಿಮ್ಮ ಬೇಡಿಕೆಯನ್ನು ತನ್ನ ಶಕ್ತಿ ಮೀರಿಯಾದರೂ ಪೊರೈಸಬಹುದು. ಆದರೆ ಅದಕ್ಕೆ ಯಾಕೋ ನನ್ನ ಮನ ಸ್ಪಂದಿಸುತ್ತಿಲ್ಲ. ನನ್ನ ಕನಸುಗಳಿಗೆ ಬಣ್ಣ ತುಂಬ ಬೇಕಿದ್ದ ನೀವು ಮಣ್ಣು ತುಂಬಿದ್ದೀರಿ, ಮನುಷ್ಯನ ಭಾವನೆಗಳಿಗಿಂತ ಹಣಕ್ಕೇ ಫ್ರಧಾನ ಕೊಡುತ್ತಿರುವ ನಿಮ್ಮೊಡನೆ ಇನ್ನು ಬದುಕಲು ನನಗೆ ಸಾಧ್ಯವಾಗಬಹುದೆ? ಇಂತಹಾ ಕೆಲವೊಂದು ಪ್ರಶ್ನೆಗಳೊಡನೆ ಅವ್ಯಕ್ತ ಭಯವೂ ನನ್ನ ಮನದಲ್ಲಿ ಬೇರೂರಿದ್ದರಿಂದ ಅದನ್ನು ಜರೂರಾಗಿ ನಿಮ್ಮಲ್ಲಿ ತೆರೆದಿಡಲೇ ಬೇಕೆಂಬ ಹಂಬಲದಿಂದ ಹೇಳುತಿದ್ದೇನೆ.ಇದಕ್ಕೆ ಕರಾರುವಕ್ಕಾಗಿ ಉತ್ತರ ನಿಮ್ಮಲ್ಲಿದ್ದರೆ ನನ್ನ ಭಾಗ್ಯ".ಎಂದು ರಿಯಾಝ್ ನನ್ನು ಕಣ್ಣ ಕೊನೆಯಲ್ಲಿ ನಿರುಕಿಸುತ್ತಾ ಮಾತನ್ನು ಮುಂದುವರಿಸ ತೊಡಗಿದೆ." ನಾವೆಲ್ಲರೂ ಈ ಬದುಕು ಕ್ಷಣಿಕ ನಶ್ವರ ಎಂದು ಪ್ರತೀ ಕ್ಷಣವೂ ಮರಣದ ಸತ್ಯಾ ಸತ್ಯತೆಯನ್ನು ಅರ್ಥ ಮಾಡಿ ಬದುಕುವವರು, ಆದರೆ ನೀವು ಬದುಕು ಶಾಶ್ವತ ವೆಂದು ಕೊಂಡು ಹಣ ಮಾತ್ರ ಜೀವನ ವೆಂದು ಕೊಂಡು ಸಂಪತ್ತನ್ನು ಹೆಚ್ಚಾಗಿ ಮೋಹಿಸುತ್ತೀರಿ. ನೀವು ಜೀವಕ್ಕಿಂತಾ ಹೆಚ್ಚಾಗಿ ಪ್ರೀತಿಸುತ್ತಿರುವ ಈ ಸಂಪತ್ತು ನಿಮ್ಮನ್ನು ಒಂದಿಲ್ಲೊಂದು ದಿನ ಮರಣದ ದವಡೆಯಿಂದ ಪಾರು ಮಾಡಲು ಸಾಧ್ಯವೇ? ಅಥವಾ ಅದೇ ಸಂಪತ್ತಿನಿಂದ ನೀವು ಎಂದೆಂದಿಗೂ ಅಜರಮರರಾಗಿ ಬದುಕಲು ಸಾಧ್ಯವೇ? ನನ್ನ ಬಾಪಾ ಮಗಳ ಬದುಕು ಬೆಳಗಳೆಂದು ಮಜ್ ಬೂರಾಗಿ ಮನೆಯನ್ನು ಅಡವಿಟ್ಟು ಕೊಡುವ ಹರಾಮಿನ ಬಡ್ಡಿ ಹಣಕ್ಕೆ ಬದಲಾಗಿ ನೀವು ನನಗೆ ಬಾಳು ಕೊಡಬಹುದು. ಆದರೆ ನಾಳೆ ಅಲ್ಲಾಹನ ಮುಂದೆ ಆ ಹರಾಮಿನ ಹೊರೆಯನ್ನು ನೀವು ಹೊತ್ತು ಕೊಳ್ಳಲು ಸಾಧ್ಯವೇ? ಎಷ್ಟೇ ದೊಡ್ಡ ಸ್ಥಿತಿವಂತನಾದರೂ ಬಡವನಾದರೂ ಒಂದಿಲ್ಲೊಂದು ದಿನ ಈ ಲೋಕಕ್ಕೆ ವಿದಾಯ ಹೇಳಲೇ ಬೇಕು. ನಾವು ಜಡ ವಸ್ತು ವಾಗಿ ಈ ಲೋಕದಿಂದ ಪ್ರಯಾಣ ಮಾಡುವಾಗ ನಮ್ಮಲ್ಲಿರುವುದು ಖಾಲಿ ಮೂರು ತುಂಡು ಬಟ್ಟೆ ಮಾತ್ರ, ಇಲ್ಲಿ ಕರಿಯ ಬಿಳಿಯನಾದರೂ ಬಡವ ಬಲ್ಲಿದನಾದರೂ ಎಲ್ಲರಿಗೂ ಒಂದೇ ಇಬ್ಬಗೆಯ ನೀತಿ, ಇದರಲ್ಲಿ ಭೇದ ಬಾವವಿಲ್ಲ.ಆದರೆ ನೀವು ಅದಲ್ಲದೆ ನನ್ನ ತಂದೆಯ ರಕ್ತ ಮಾಂಸ ಬೆವರೊಡನೆ ಚೆಂಡಾಡಿ ತೆಗೆದ ಆ ಹಣವನ್ನು ಜೊತೆಯಾಗಿ ಕೊಂಡೊಯ್ಯಲು ಸಾಧ್ಯವೆ? ಒಂದು ವೇಳೆ ಕೊಂಡೊಯ್ದರೂ ಮಣ್ಣಿನಿಂದ ಸ್ರಷ್ಟಿಯಾದ ಮಾನವ ಮಣ್ಣಾಗುವುದು ಸಹಜ. ಆದರೆ ಆ ಹಣ ನಿಮ್ಮೊಡನೆ ಮಣ್ಣಾಗದೆ ಹಾಗೆಯೇ ಉಳಿಯಲು ಸಾಧ್ಯವೇ ? ಹೇಳಿ "?ಎಂದು ನಾನು ಪ್ರಶ್ನಿಸುವುದನ್ನು ನಿಲ್ಲಿಸಿ ಅವನ ಮುಖವನ್ನೇ ನೋಡ ತೊಡಗಿದೆ.

  ಅಲ್ಲಿ ಕುಳಿತಿದ್ದವರೆಲ್ಲರೂ ಅಪ್ರತಿಭರಾಗಿ ನನ್ನನ್ನೇ ದಿಟ್ಟಿಸುತಿದ್ದರು. ಕೆಲವರ ನೋಟಗಳಲ್ಲಿ ದ್ವೇಷವಿದ್ದರೆ ಇನ್ನು ಕೆಲವರಲ್ಲಿ ಮೆಚ್ಚುಗೆಯ ಭಾವವಿತ್ತು. ಮತ್ತಲವರಲ್ಲಿ ಕೋಪದ ಛಾಯೆಯಿತ್ತು.ತಂದೆ ಮಾತ್ರ ಭಯ ಹಾಗೂ ದುಃಖ್ಖದಿಂದ ಹಿಡಿಯಷ್ಟಾಗಿ ಹೋಗಿದ್ದರು ಎಂಬುವುದಕ್ಕೆ ಅವರ ಮುಖವೇ ಸಾಕ್ಷಿಯಾಗಿತ್ತು.ನಾನು ಅಲ್ಲಿ ನಿಲ್ಲದೆ ಸೀದಾ ಒಳಗೆ ನಡೆದೆ.ಮನದಲ್ಲಿ ದುಃಖ ಕೊತಕೊತನೆ ಕುದಿಯುತಿತ್ತು. "ಎಂತಹಾ ಮಾತನಾಡಿದ್ದು ಮೋಳೇ..? ಹೆಣ್ಣು ಮಕ್ಕಳಿಗೆ ಇದು ಭೂಷಣವಾ"? ಎಂದು ಕೇಳುತ್ತಾ ಉಮ್ಮಾ ನನ್ನ ಹಿಂದೆಯೇ ಬಂದಿದ್ದರು. ಕಿಟಕಿಯ ಕಂಬಿಗಳನ್ನು ಗಟ್ಟಿಯಾಗಿ ಹಿಡಿಯುತ್ತಾ ಸರಳುಗಳಿಗೆ ತಲೆಯಾನಿಸಿ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ. ಮನದ ನೋವನ್ನೆಲ್ಲಾ ಕಾರಿದ ಮೇಲೆ ದುಃಖ ಕಟ್ಟೆಯೊಡೆದಿತ್ತು. ಹೊರಗಿನ ಹಾಲ್ ನಲ್ಲಿ ಜೋರು ಜೋರಾಗಿ ಧ್ವನಿ ಕೇಳಿ ಬರತೊಡಗಿದಾಗ, ಉಮ್ಮ ಭಯದಿಂದ ಬೆವರ ತೊಡಗಿದರು. ಏನಾಗುತ್ತದೋ ಏನೋ ಎಂದು ಅವರು ಕಾಲು ಸುಟ್ಟ ಬೆಕ್ಕಿನಂತೆ ಶಥ ಪಥ ತಿರುಗುತ್ತಿದ್ದರು. ಹಾಲೆಲ್ಲಾ ನಿಶ್ಯಬ್ಧ ವಾದ ಮೇಲೆ ಬಾಪಾ ದುಃಖದಿಂದ ನನ್ನನ್ನು ನೋಡುತ್ತಾ "ಎಂತಹಾ ಕೆಲಸ ಮಾಡಿದೆ ಮೋಳೇ..ಬಂದವನನ್ನು ನಿನ್ನ ಮಾತಿನ ವಾಗ್ದಾಳಿಯಿಂದ ಓಡಿಸಿ ಬಿಟ್ಟೆಯೆಲ್ಲಾ..ಇನ್ನೇನು ಮಾಡೋದು"? ಎಂದು ಸಣ್ಣಗೆ ನಡುಗುತ್ತಾ ಕೋಪದಿಂದ ಹೇಳಿದರು. ನಾನು ತುಂಬಿದ ನಯನ ಗಳೊಂದಿಗೆ ಬಾಪಾನಾ ಮುಖವನ್ನೇ ದಿಟ್ಟಿಸುತ್ತಾ ಮೌನವಾಗಿ ಅಳತೊಡಗಿದೆ.ನನಗಾದರೂ ಹಗೆಲ್ಲಾ ಹೇಳಲು ಮನಸಿತ್ತೇ ? ಬದುಕಿನ ಬಂಡಿ ತೀರಾ ತುಂಡಾಗಲು ತೊಡಗಿದಾಗ ವಾಸ್ತವದ ಸತ್ಯವನ್ನು ಅರಿವಾಗಿಸಲು ಪ್ರಯಥ್ನ ಪಟ್ಟೆ, ಇದು ತಪ್ಪಾ? ಅಲ್ಲದೆ ತಿಂಗಳಿಗೊಮ್ಮೆ ಹಣಕ್ಕಾಗಿ ಪೀಡಿಸುವವನು ನನ್ನನ್ನು ಸುಖವಾಗಿಡಬಲ್ಲನೇ? ಇದು ಯಾಕೆ ಬಾಪಾನಿಗೆ ಅರ್ಥವಾಗುವುದಿಲ್ಲ? ನನ್ನ ಬಾಪಾ ಕೊಟ್ಟ ಹಣದಿಂದ ಅವ ನನ್ನನ್ನು ಸಾಕಬೇಕೆ? ಎಂದು ನಾನು ನನ್ನಲ್ಲೇ ಪ್ರಶ್ನಿಸುತ್ತಿದ್ದೆ.

  ದಿನಗಳು ಯಾಂತ್ರಿಕವಾಗಿ ಉರುಳುತಿತ್ತು. ಬದುಕು ತೀರಾ ಸಪ್ಪೆ ಎನಿಸತೊಡಗಿತ್ತು. ಹಿಂದಿನ ರಾತ್ರಿ ಕೀ ಕೊಟ್ಟು ಮಲಗಿದ ಗಡಿಯಾರದಂಗೆ ಸಾಗುತಿತ್ತು ಬದುಕು. ಬಾಪಾನಾ ಮನದೊಳಗಿನ ದುಃಖ ಮುಖದ ಮೇಲೆ ಎದ್ದು ಕಾಣತೊಡಗಿದ್ದವು. ನಾನು ಬಾಪಾನಿಗೆ ಹೊಸ ತಲೆ ನೋವನ್ನು ಕೊಡುವಂತಾದೆನೇ? ಎಂದು ನನ್ನೊಳಗೇ ನಾನು ಸಾವಿರಾರು ಬಾರಿ ಯೋಚಿಸಿ ಯೋಚಿಸಿ ಸುಸ್ತಾಗಿದ್ದೆ. ರಬ್ಬೇ ಇದೆಲ್ಲದಕ್ಕೂ ಒಂದು ಪರಿಹಾರ ಕಾಣಿಸು ನೀನಲ್ಲದೆ ಇದಕ್ಕೆ ಪರಿಹಾರ ಕಾಣಿಸುವವನು ಬೇರೆ ಯಾರೂ ಇಲ್ಲ ರಬ್ಬೇ... ಎಂದು ಎರಡೂ ಕೈಗಳನ್ನು ಮೇಲಕ್ಕೆತ್ತಿ ಮನನೊಂದು ಪ್ರಾರ್ಥಿಸುತ್ತಾ ಕುಳಿತಿದ್ದೆ. ತಂದೆ ಗಡಿಬಿಡಿಯಿಂದ ಬರುತ್ತಾ "ಸಾಕಿರಾ ಬೇಗ ಹೊರಡು ಬೇಗ..... "ಎಂದು ಅವಸರ ಅವಸರ ವಾಗಿ ಹೊರಡಿಸಿ ನನ್ನನ್ನು ಹಾಸ್ಪಿಟಲ್ಲಿಗೆ ಕರೆ ತಂದಿದ್ದರು. ರಿಯಾಝ್ ಹಾಸ್ಪಿಟಲ್ ಬೆಡ್ಡಲ್ಲಿ ಕೈ ಕಾಲು ಹಣೆಗೆ ಬ್ಯಾಂಡೇಜು ಬಿಗಿದು ಮಲಗಿದ್ದ ನಾನು ಬೆಪ್ಪಳಂತೆ ಅವನ ಮುಖವನ್ನೇ ತದೇಕ ಚಿತ್ತದಿಂದ ದಿಟ್ಟಿಸುತ್ತಿದ್ದೆ. ತಂದೆ ಮೆಲ್ಲನೆ ಹೇಳುತ್ತಿದ್ದರು.. ಬೈಕ್ ಆಕ್ಸಿಡೆಂಟಂತೆ ಸಾಕಿರಾ...ಅವ ತೆಗೆದ ಲಕ್ಷ ಹಣವನ್ನು ಹಿಂದಿರುಗಿಸಲೆಂದು ಮನೆಗೆ ಬರುವಾಗ ಈ ಆಕ್ಸಿಡೆಂಟ್ ಆದದ್ದಂತೆ, ತಂದೆಯ ಮಾತು ಕೇಳಿ ನಾನು ಅವನನ್ನೇ ನೋಡ ತೊಡಗಿದೆ. ಆತ ನನ್ನನ್ನೇ ನೋಡುತ್ತಾ "ಸಾಕಿರಾ" ಎಂದು ಕರೆದ,. ನಾನು ಆ ಕ್ಷಣದಲ್ಲಿ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದಂತಹಾ ಸಂದಿಗ್ಧ ಸ್ಥಿತಿಯಲ್ಲಿದ್ದೆ. ಆತ ಮತ್ತೊಮ್ಮೆ ಕರೆದ "ಸಾಕಿರಾ.... ನಾನು ಮ್... ಮ್... "ಎಂದವನ ಕರೆಗೆ ಓ ಗೊಡುತ್ತಾ ಹತ್ತಿರ ನಿಂತಿದ್ದೆ."ಸಾಕಿರಾ ಇಹದ ಈ ಕ್ಷಣಿಕ ಬದುಕಿನಲ್ಲಿ ಮನುಷ್ಯ ಎಷ್ಟೊಂದು ದುರ್ಬಲನಲ್ವಾ? ನಮಗಿರುವ ಆಯುಷ್ಯ ಇನ್ನು ಕೆಲವೇ ಕ್ಷಣಗಳೋ ನಿಮಿಷಗಳೋ ಗಂಟೆಗಳೋ, ದಿನಗಳೋ ತಿಂಗಳೋ ವರ್ಷವೋ.....,ಎಂದು ಯೋಚಿಸದೆ ಎಂತಹಾ ಅಜ್ಣಾನ ದಿಂದ ಬದುಕುತಿದ್ದೇವಲ್ಲಾ..."? ಎಂದು ಆಗ ತಾನೇ ಭೋಧ್ಯ ಪೆಟ್ಟಂತೆ ನನ್ನ ಕೆಯ್ಯನ್ನು ಭಧ್ರ ವಾಗಿಡಿಯುತ್ತಾ ಹೇಳುತಿದ್ದ.ನಾನು ಮನದಲ್ಲೇ.., ಈ ಸತ್ಯ ಅರಿವಾಗಿಸಲು ವಿಧಿ ಅವನಿಗೆ ಆಕ್ಸಿಡೆಂಟ್ ರೂಪದಲ್ಲಿ ಪಾಠ ಕಲಿಸಿತ್ತೇ...? ಎಂದು ಧುಮ್ಮಿಕ್ಕಿ ಬರುವ ದುಃಖವನ್ನು ಹತೋಟಿಯಲ್ಲಿಡಲು ಪ್ರಯತ್ನಿಸುತ್ತಾ, ಕಿರುಗಣ್ಣಿನಲ್ಲೇ ಅವನನ್ನು ನಿರುಕಿಸುತ್ತಾ ಯೋಚಿಸುತ್ತಿದ್ದೆ.ಆತ ಮತ್ತೂ "ಸಾಕಿರಾ.. ನನ್ನನ್ನು ಕ್ಷಮಿಸುತ್ತಿಯಾ ನಾನು ಕ್ಷಮೆಗೆ ಅರ್ಹನಲ್ಲದಿದ್ದರೂ "ಎಂದು ನೋವಿನ ಧ್ವನಿಯಲ್ಲಿ ನನ್ನ ಕೈ ಹಿಡಿದು ಪಿಸುಗುಟ್ಟುತ್ತಿದ್ದ. ನಾನು ಹಿಂತಿರುಗಿ ನೋಡಿದೆ, ಉಮ್ಮ ಬಾಪಾ ಆವಾಗಲೇ ಹೊರ ನಡೆದಿದ್ದರು. ಅಲ್ಲಿ ನಾನು ಮತ್ತು ಅವ ಮಾತ್ರ, ನಾನು ತುಂಬಿದ ನಯನಗಳೊಂದಿಗೆ ಅವನನ್ನೇ ನೋಡತೊಡಗಿದೆ. ಅವ ನನ್ನ ಕೈಯನ್ನು ಭದ್ರವಾಗಿಡಿದಿದ್ದ.. ಇನ್ನೆಂದೂ ಈ ಕೈಯನ್ನು ಬಿಟ್ಟು ಬಿಡಲಾರೆ ಎಂಬತೆ, ಮಾಡಿದ ತಪ್ಪಿಗೆ ಕ್ಷಮೆಯಾಚಿಸುತ್ತಾ......’
  posted by ASHRAF @ 2:38 AM   0 comments
  ಅಜ್ಞಾನವು ಅಳಿಯಲಿ, ಸುಜ್ಞಾನವು ಬೆಳಗಲಿ
  Thursday, June 11, 2009
  "ಓದಿರಿ ಸ್ರಷ್ಟಿಸಿದ ನಿಮ್ಮ ಪ್ರಭುವಿನ ನಾಮದೊಂದಿಗೆ,ಅವನು ಹೆಪ್ಪುಗಟ್ಟಿದ ಒಂದು ರಕ್ತ ಪಿಂಡದಿಂದ ಮಾನವನನ್ನು ಸ್ರಷ್ಟಿಸಿದನು, ಓದಿರಿ ಮತ್ತು ನಿಮ್ಮ ಪ್ರಭು ಮಹಾ ಉದಾರಿ,ಅವನು ಲೇಖನಿಯ ಮೂಲಕ ವಿದ್ಯೆ ಕಲಿಸಿದನು,ಮಾನವನು ತಿಳಿದಿರದಂತಹಾ ಜ್ಞಾನವನ್ನು ಅವನು ದಯಪಾಲಿಸಿದನು."
  ಇದು ಮೊತ್ತ ಮೊದಲ ಬಾರಿಗೆ ಅವತೀರ್ಣಗೊಂಡ ಕುರ್‌ಆನಿನ ಪ್ರಥಮ ಅಧ್ಯಾಯ ವಾಗಿದೆ.ಈ ಸೂಕ್ತ ಅವತೀರ್ಣವಾಗಿ ಒಂದೂವರೆ ಸಾವಿರ ವರ್ಷಗಳು ಕಳೆದರೂ ಈಗಲೂ ಮುಸ್ಲಿಮರು ವಿದ್ಯೆಯಲ್ಲಿ ಬಹಳಷ್ಟು ಹಿಂದಿರುವುದು ತೀರಾ ದುಃಖಕರ ಸಂಗತಿಯಾಗಿದೆ. ಇಸ್ಲಾಮ್ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. "ಶಿಕ್ಷಣ ಪಡೆಯುವುದು ಪ್ರತೀಯೊಬ್ಬ ಮುಸ್ಲಿಂ ಸ್ತ್ರೀ ಪುರುಷರ ಮೇಲೆ ಕಡ್ಡಾಯವೆಂದು ನೆಬಿ (ಸ.ಅ) ರವರು ಸಾರಿದ್ದಾರೆ"." ಜ್ಞಾನಿಗಳು ಅಜ್ಞಾನಿಗಳು ಎಂದಾದರೂ ಸರಿಸಮಾನರಾಗಬಲ್ಲರೆ?" ಎಂದು ಅಲ್ಲಾಹು ಕುರ್‌ಆನಿನಲ್ಲಿ ಕೇಳುತ್ತಾನೆ. ಕತ್ತಲು ಬೆಳಕು ಹೇಗೆ ಸರಿಸಮಾನರಾಗಲಾರವೋ ಕಣ್ಣಿದ್ದವನೂ ಅಂಧನೂ ಹೇಗೆ ಸರಿಸಮಾನಲಾಗಲಾರವೋ? ಹಾಗೆಯೇ ಜ್ಞಾನಿಯೂ ಅಜ್ಞಾನಿಯೂ ಸರಿಸಮಾನಲಾಗಲಾರ. ಆದರೆ ನಮ್ಮ ಸಮೂಹ ಮಾತ್ರ ಶಿಕ್ಷಣದ ಮಹತ್ವವನ್ನರಿಯದೆ ಅದರ ಅಗತ್ಯವನ್ನು ತಿಳಿಯದೆ ಅಧಪತನದ ಹಾದಿಯಲ್ಲಿದೆ. ಇದಕ್ಕೆಲ್ಲಾ ಕಾರಣರು ಯಾರು? ಹೇಗೆ? ಮತ್ತು ಏನು? ಎಂಬ ಪ್ರಶ್ನೆ ಮನಸ್ಸಿನ ಮೂಲೆಯಲ್ಲಿ ಪ್ರಶ್ನಾರ್ಥಕ ಚಿಹ್ನೆಯಾಗಿ ಮೂಡಿ ಬರುತ್ತಿದೆ.
  ಮಕ್ಕಳಿಗೆ ಶಿಕ್ಷಣ ಕಲಿಯಲು ಆಸೆ ಬೆಟ್ಟದಷ್ಟಿದ್ದರೂ , ಅವರ ಅಂತರಂಗದ ಆಸೆಗೆ ಒತ್ತು ಕೊಡದೆ ಪೊಳ್ಳು ನೆವಗಳನ್ನು ಹೇಳಿ ಅರ್ಧದಲ್ಲಿಯೇ ಶಿಕ್ಷಣ ವನ್ನು ಮೊಟಕುಗೊಳಿಸುವ ಹೆತ್ತವರ ಸಂಸ್ಕ್ರತಿಯನ್ನು ಕಂಡು ಖೇದವೆನಿಸುತ್ತಿದೆ.ತಮ್ಮ ಅನಿವಾರ್ಯಗಳಿಗಾಗಿ ಮಕ್ಕಳ ವಿಧ್ಯಾಭ್ಯಾಸವನ್ನು ಬಲಿ ಕೊಡುವುದು ಎಷ್ಟು ಸರಿ? ಇದು ಎಲ್ಲಾ ಹೆತ್ತವರು ಯೋಚಿಸಬೇಕು.ಒಬ್ಬ ತಂದೆ ತನ್ನ ಮಕ್ಕಳೀಗೆ ಉನ್ನತ ಮಟ್ಟದೆ ಶ್ರೇಷ್ಟ ಶಿಕ್ಷಣ ವನ್ನು ಕೊಟ್ಟರೆ ಅದುವೇ ಆ ಮಕ್ಕಳಿಗೆ ಇಹ ಪರಗಳೆರಡರಲ್ಲೂ ವಿಜಯಿಯಾಗುವ ಅದ್ಬುತ ನಿಧಿಯಾಗಿರುತ್ತದೆ. ಅಲ್ಲದೆ ತಂದೆ ತಾಯಂದಿರ ವಿಜಯಕ್ಕೂ ಕೂಡಾ... ಶ್ರೇಷ್ಟ ಮಟ್ಟದ ಶಿಕ್ಷಣಕ್ಕೆ ಬದಲಾಗಿ ಒಬ್ಬ ತಂದೆ ತನ್ನ ಮಕ್ಕಳಿಗೆ ಬೇರೇನನ್ನೂ ಕೊಡಲಾರ. ಎಷ್ಟು ಆಸ್ತಿ ಅಂತಸ್ತಿದ್ದರೂ ಅಷ್ಟೇ..ಎಂತಹಾ ದುರ್ಬಲ ಪ್ರಸಂಗ ಗಳಲ್ಲೂ ಬದುಕನ್ನು ಎದುರಿಸುವ ಶಕ್ತಿ ಬರುವುದು ಜ್ಞಾನದ ಅರಿವಿನಿಂದಲೇ ಹೊರತು , ಹಣದ ಬಲದಿಂದ ಅಲ್ಲ. ಅಲ್ಲದೆ ಹಣ ಮತ್ತು ಅಧಿಕಾರವೂ ಎಂದಿಗೂ ಅದೇ ಸರ್ವಸ್ವವೂ ಅಲ್ಲ.
  ಪ್ರತ್ಯೇಕವಾಗಿ ಹೆಣ್ಣು ಮಕ್ಕಳ ವಿಧ್ಯಾಭ್ಯಾಸ ಅರ್ಧದಲ್ಲಿಯೇ ಮೊಟಕು ಗೊಳಿಸುವುದನ್ನು ನಾವು ಕಾಣ ಬಹುದು. ಎಷ್ಟು ಕಲಿತರೂ ಅಡುಗೆ ಕೋಣೆಯಲ್ಲಿ ಇರುವವಳಲ್ವಾ? ಹೆಣ್ಣು . ಮುಸುರೆ ತಿಕ್ಕುವವಳಿಗೆ ಶಿಕ್ಷಣ ಯಾಕೆ? ಮುಸುರೆ ತಿಕ್ಕಳು ಕಲಿತರೆ ಸಾಕು ಎಂಬ ತಾತ್ಸಾರ ಭಾವವೇ? ಇದಕ್ಕೆ ಕಾರಣವಿರಬಹುದು. ಆದ್ರೆ ಹೆಣ್ಣೊಂದು ಕಲಿತರೆ ಸ್ಕೂಲೊಂದು ತೆರೆದಂತೆ ಎಂಬುವುದನ್ನು ಮರೆಯುತ್ತಾರೆ ಹೆಚ್ಚಿನ ಜನ. ಹೆಣ್ಣು ಕಲಿತರೆ ಕುಟುಂಬ ಒಳ್ಳೆಯದಾಗುತ್ತದೆ, ಕುಟುಂಬ ಒಳ್ಳೆಯದಾದರೆ ಸಮಾಜ ಒಳ್ಳೆಯದಾಗುತ್ತೆ. ಸಮಾಜ ಒಳ್ಳೆಯದಾದರೆ ರಾಷ್ಟ್ರ ಒಳ್ಳೆಯದಾಗುತ್ತದೆ. ಇದು ನಾವು ಯಾವಾಗಲೂ ಕೇಳಿ ಬರುತ್ತಿರುವ ಬಾಯಿ ಮಾತಾಗಿರುತ್ತದೆ.ರಾಷ್ಟ್ರ ಒಳ್ಳೆಯದಾಗಬೇಕಾದರೆ ಹೆಣ್ಣು ಕಲಿಯಬೇಕು. ಶಿಕ್ಷಿತಳಾಗಬೇಕು. ಕುಟುಂಬ ಮತ್ತು ಸಮಾಜ ರಾಷ್ಟ್ರದ ಪ್ರಮುಖ ಕೀಲಿ ಕೈ ಹೆಣ್ಣು. ಅಲ್ಲದೆ ಮಗುವಿಗೆ ಮನೆಯೇ ಮೊದಲ ಪಾಠ ಶಾಲೆ. ತಾಯಿಯೇ ಮೊದಲ ಗುರು. ಈ ಎಲ್ಲಾ ಆಯಾಮಗಳಲ್ಲಿ ವಿವಿಧ ಮಜಲುಗಳಲ್ಲಿ ನೋಡಿದರೆ ಹೆಣ್ಣು ಶಿಕ್ಷಿತಳಾಗ ಬೇಕಿರುವುದು ಅಗತ್ಯ ಎಂಬುವುದನ್ನು ಮನಗಾನ ಬಹುದು.
  ಹೆಣ್ಣು ಮಕ್ಕಳಿಗೆ ಶಿಕ್ಷಣದ ಅಗತ್ಯ ವಿಲ್ಲವೆಂದು ಹೇಳುತ್ತಿರುವವರು ೧೪೩೦ ವರ್ಷಗಳ ಹಿಂದೆ ಒಮ್ಮೆ ಕಣ್ಣಾಡಿಸಿ ನೋಡಲಿ. ಅಥವಾ ಬಲ್ಲವರಿಂದ ಕೇಳಿ ತಿಳಿಯಲಿ. ಹದೀಸ್ ಪಂಡಿತರಲ್ಲಿ ಅಗ್ರಗಣ್ಯರಾಗಿ ಅತೀ ಹೆಚ್ಚು ವರದಿ ಮಾಡಿದ ಹದೀಸ್ ಪಂಡಿತೆಯೆಂಬ ಬಿರುದು ತೊಟ್ಟ ನಮ್ಮ ಮಾತೆ ಹ ಆಯಿಶಾ ಬೀವಿ (ರ.ಅ)ರವರನ್ನು ನೋಡಿ ಕಲಿಯಲಿ. ಅಡುಗೆ ಕೋಣೆಯಲ್ಲಿ ಮುಸುರೆ ತಿಕ್ಕುವವಳಿಗೆ ಶಿಕ್ಷಣ ಯಾಕೆ ಎಂಬ ಪ್ರಶ್ನೆ ಇನ್ನಾದರೂ ಅಳಿಯಲಿ.ಇಸ್ಲಾಮಿನಲ್ಲಿ ಸ್ತ್ರೀ ಗೆ ಕಲಿಯಲು ಅನುಮತಿ ನೀಡಿಲ್ಲವೆಂಬುವುದು ಪೊಳ್ಳು ವಾದವಷ್ಟೇ. ಹ ಅಬ್ದುಲ್ಲಾ ಬಿನ್ ಅಬ್ಬಾಸ್ (ರ.ಅ) ರವರು ವರದಿ ಮಾಡುತ್ತಾರೆ.ಪ್ರವಾದಿ (ಸ.ಅ) ರವರು ಹೇಳಿದರು. ಯಾವನು ಮೂವರು ಪುತ್ರಿಯ ಅಥವಾ ಸಹೋದರಿಯರನ್ನು ತರಬೇತು ಗೊಳಿಸಿ ವಿದ್ಯೆ ನೀಡಿ ಅವರೊಂದಿಗೆ ಅತ್ಯುತ್ತಮ ವರ್ತನೆ ತೋರುವನೋ "ಅಲ್ಲಾಹನು ಅವನಿಗೆ ಸ್ವರ್ಗ ವನ್ನು ಕಡ್ಡಾಯಗೊಳಿಸುತ್ತಾನೆ"ಆಗ ಒಬ್ಬ ವ್ಯಕ್ತಿ ಇಬ್ಬರು ಪುತ್ರಿಯರು ಅಥವಾ ಸಹೋದರಿಯರಿದ್ದರೆ??? ಎಂದು ಪ್ರಶ್ನಿಸಿದಾಗ ಪ್ರವಾದಿವರ್ಯ(ಸ.ಅ)ರು ಆತನಿಗೂ ಅದೇ ಪ್ರತಿಫಲ ದೊರಕುವುದು ಎಂದರು. ಹ ಅಬ್ದುಲ್ಲಾ ಬಿನ್ ಅಬ್ಬಾಸ್ (ರ.ಅ) ರವರು ಹೇಳುತ್ತಾರೆ, ಯರಾದರೂ ಒಬ್ಬಳು ಪುತ್ರಿ ಅಥವಾ ಸಹೋದರಿಯ ಬಗ್ಗೆ ಪ್ರಶ್ನಿಸುತ್ತಿದ್ದರೂ ಪ್ರವಾದಿವರ್ಯ(ಸ.ಅ)ರು ಅದೇ ಉತ್ತರವನ್ನು ನೀಡುತ್ತಿದ್ದರು. (ಮಿಶ್ಕಾತ್) ಅಲ್ಲದೆ ಹೆಣ್ಣೊಬ್ಬಳು ಶಿಕ್ಷಿತಳಾದರೆ ಅದರಿಂದ ಕುಟುಂಬಕ್ಕೆ ಬಹಳಷ್ಟು ಪ್ರಯೋಜನವಿದೆ. ಉಳಿತಾಯ ಹಾಗೂ ಒಳಿತೂ ಇದೆ. ಯಾವುದೇ ಮಜಲುಗಳಲ್ಲಿಯೂ ತಾನು ಕಲಿತ ಶಿಕ್ಷಣದ ಪ್ರಯೋಜನವನ್ನು ಪಡೆಯಬಹುದಾಗಿದೆ. ೧.. ವರಾನ್ವೇಷನೆಯ ವೇಳೆಯಲ್ಲಿ ಅಷ್ಟು ಕಲಿತಿದ್ದಾಳೆ, ಇಷ್ಟು ಕಲಿತಿದ್ದಾಳೆಂದು ಕಲಿಯದ ಡಿಗ್ರಿಗಳನ್ನು ಅವಳ ಹೆಸರಿನ ಮುಂದೆ ಹಾಕಿ, ಸುಳ್ಳು ಹೇಳಿ ಮದುವೆ ಮಾಡುವುದು ತಪ್ಪುತ್ತದೆ.
  ೨... ಮಕ್ಕಳಿಗೆ ಮನೆಯಲ್ಲಿಯೇ ಟ್ಯೂಷನ್ ಕೊಟ್ಟು ಮಕ್ಕಳ ಟೈಮೂ ಹಾಗೂ ಹಣವೂ ಉಳಿತಾಯ ಮಾಡಬಹುದು.
  ೩... ಡಾಕ್ಟರ್ ಕೊಟ್ಟ ಚೀಟಿ ಅಥವಾ ಬೇರೇನಾದರೂ ಕಾಗದವನ್ನು ಹಿಡಿದು ಇದು ಸ್ವಲ್ಪ ಓದಿ ಏನಿದೆಯೆಂದು ಹೇಳು. ಎಂದು ಎಲ್ಲರ ಬಳಿ ಅಂಡಲೆಯುವುದು ತಪ್ಪುತ್ತದೆ.
  ಬರೆಯುತ್ತಾ ಹೋದರೆ ಇಂತಹಾ ಎಷ್ಟೆಷ್ಟೋ ಉದಾಹರಣೆಗಳು ಸಿಗಬಹುದು ನಮಗೆ. ಅಥವಾ ಎಷ್ಟೋ ಬಾರಿ ಅದರ ಅನುಭವವೂ ನಮಗಾಗಿರಬಹುದು.ಶಿಕ್ಷಣದಿಂದ ಲಾಭವೇ ಹೊರತು ಎಂದೂ ನಷ್ಟವಾಗಲು ಸಾಧ್ಯವಿಲ್ಲ. ಶಿಕ್ಷಣ ಸಮರಸ ಸುಸಂಪನ್ನ ಸುಸಂಸ್ಕ್ರತ ಹಾಗೂ ಸಮರ್ಪಿತ ಜೀವನವನ್ನು ನಡೆಸಲು ಶಿಕ್ಷಣವು ಇಂದು ಅತೀ ಅಗತ್ಯ ವಾಗಿದೆ.
  ಪ್ರಾಣ ವಾಯು ನಮಗೆ ಹೇಗೆ ಅನಿವರ್ಯವೋ ಹಾಗೆಯೇ ಶಿಕ್ಷಣವೂ ಅನಿವಾರ್ಯ. ನಮ್ಮಲ್ಲಿ ಹೆಚ್ಚಿನವರು ಈ ಶಿಕ್ಷಣದ ಮಹತ್ವವನ್ನು ಅರಿತಿಲ್ಲದಿರುವುದ ದುರಾದ್ರಷ್ಟವಲ್ಲದೆ ಮತ್ತೇನು?ಮನುಷ್ಯ ಮಸಿಷ್ಕವನ್ನು ಕ್ರಿಯಾಗೊಳಿಸುವ ಸಾಧನವಾಗಿದೆ ಶಿಕ್ಷಣ. ಅಸತ್ಯದಿಂದ ಸತ್ಯದೆಡೆಗೆ..ಕತ್ತಲಿನಿಂದ ಬೆಳಕಿನೆಡೆಗೆ ಒಯ್ಯುವುದೇ ಜ್ಞಾನ.ಒಂದು ಸ್ವಸ್ಥ ಸಮಾಜ ಮತ್ತು ಸುಂದರ ವಾತಾವರಣವನ್ನು ರೂಪಿಸಬೇಕೆಂದರೆ ಶಿಕ್ಷಣ ಹಾಗೂ ಜ್ಞಾನ ದ ಬೆಳಕಿನಿಂದ ಮಾತ್ರ ಸಾಧ್ಯ.ಅರಿವು ಅಥವಾ ಜ್ನಾನ ಅಲ್ಲಾಹುವಿನ ಒಂದು ಅಪಾರ ಅನುಗ್ರಹವಾಗಿದೆ.ಜ್ನಾನವಿದ್ದರೆ ಸಾಲದು. ಜ್ನಾನದ ಮಹತ್ವವನ್ನು ಅರಿತು ಕೊಳ್ಳಬೇಕು. ಮನುಷ್ಯನನ್ನು ಮನುಷ್ಯನನ್ನಾಗಿ ಮಾಡುವ ಸಾಧನವೇ ಶಿಕ್ಷಣ.
  ಖ್ಯಾತ ಸಾಹಿತಿಯೋರ್ವರು ನಮ್ಮ ಮುಂದೆ ಶಿಕ್ಷಣದ ಮಹತ್ವವನ್ನು ಬಿಚ್ಚಿಟ್ಟಿದ್ದಾರೆ."ತಿಳಿದಷ್ಟೂ ತಿಳಿಯಬೇಕೆನಿಸುವುದೇ ಜ್ಞಾನ. ಜ್ಞಾನ-ಅಜ್ಞಾನವನ್ನು ವಿಧಿವತ್ತಾಗಿ ವಿವರಿಸಿ ವಿಶ್ಲೇಷುವುದೇ ವಿದ್ಯೆ. ತಿಳಿದಷ್ಟೂ ತಿಳಿಯಲು ಹೊರಟವರು ನಾವು. ತಿಳಿದಿದ್ದಾಯಿತು ಎನ್ನಿಸಿದ ಕೂಡಲೆ ನಾವು ಮುಂದೆ ಹೊರಡದೇ ನಿಂತಲ್ಲೇ ನಿಂತು ಬಿಡುತ್ತೇವೆ. ಹಾಗೆ ನಿಲ್ಲುವುದು ಬದುಕಿನ ರೀತಿಯಲ್ಲ.
  ನಮಗೆ ಸೇರದ ಸಂಗತಿಗಳ ನಡುವೆಯೆ ನಮ್ಮ ಬದುಕು ಇದೆ ಎಂಬುದನ್ನು ನೋಡುತ್ತಲೆ ಇದ್ದೇವೆ; ಬದುಕಿದ್ದೇವೆ; ಬದುಕಲೆ ಬೇಕು. ನಮಗೆ ಸೇರದ ವಿಷಯಗಳ ಬಗ್ಗೆ ಚಿಂತಿಸುತ್ತೇವೆ; ಹಾಗಿ ಚಿಂತಿಸುವುದೇ ಜೀವಂತಿಕೆಯ ಲಕ್ಷಣವೇನೋ ಎನ್ನಿಸುತ್ತಲೂ ಇರುತ್ತದೆ. ಹಾಗೆ ಚಿಂತಿಸುವಂತೆ ಮಾಡುವುದೇ ನಿಜವಾದ ಜ್ಞಾನರ್ಜನೆಯ ಮೊದಲ ಹಂತ. ಹಾಗೆ ಮುಂದುವರಿಯುವುದೂ ಕೂಡ. ಹದಗೆಟ್ಟಿರುವುದನ್ನೆಲ್ಲ ನೋಡುತ್ತ ಹದವರಿತು ಬದುಕುವುದು ಹೇಗೆಂದು ಅರಿಯವುದೇ ಆಗಿರುತ್ತದೆ. ಅಂತಹ ಚಿಂತೆಯಿಂದಲೇ ಚಿಂತನೆಯೂ ಬರುತ್ತದೆ. ಅದು ಬರೀ ಅಕ್ಷರ ವಿದ್ಯೆಯಲ್ಲ. ಅಂಕಗಳಿಸುವು ವಿದ್ಯೆಯಲ್ಲ; ಅನುಭವಕ್ಕೆ ಬೆಲೆ ತೆರಬೇಕಾದ ಮನಸ್ಸು. ಜ್ಞಾನರ್ಜನೆಗಾಗಿಯೆ ಮಾಡಬೇಕಾದ ತಪಸ್ಸು."
  -ಎಚ್.ಶಿವರಾಂ
  ಕಲಿಯಲು ಮನ್ಸಿದ್ದವರು ನಮ್ಮಲ್ಲಿ ತುಂಬ ಜನ ಇದ್ದಾರೆ. ಆದರೆ ಯಾಕೋ ಅನಗತ್ಯ ಭಯದಿಂದ ಕಲಿಕೆಯಿಂದ ಹಿಂದೆ ಸರಿಯುತ್ತಿದ್ದರೆ ಅವರು. ಈ ವಯಸ್ಸಿನಲ್ಲಿ ನಾನು ಕಲಿಯುವುದಾ? ಈ ವಯಸ್ಸಿನಲ್ಲಿ ಕಲಿಯಲು ನನಗೆ ಸಾಧ್ಯವಾಗಬಹುದಾ? ಎಂದು ಹೇಳುವವರು ನೆಬಿ (ಸ.ಅ)ರವರಿಗೆ ವಹ್ಯ್ ಲಭಿಸಿದ್ದು.( ಅನಕ್ಷರಸ್ಥರಾದ ನೆಬಿ ಸ.ಅ ರವರಿಗೆ ಕುರ್‌ಆನ್ ವಹ್ಯ್ ಮುಖೇನ ಬಂದಿದ್ದು) ಅವರ ೪೦ ನೇ ವರ್ಷದಲ್ಲಿ ಎಂಬುವುದನ್ನು ಮನಗಾನಬೀಕು.ಕಲಿಕೆಗೆ ವಯಸ್ಸಿನ ಪರಿಮಿತಿಯಿಲ್ಲ. ಕಲಿಕೆಗೆ ಬೇಕಾದುದು ಶುದ್ಧವಾದ ಮನಸ್ಸು, ಕಲಿಯುತ್ತೇನೆ ಎಂಬ ಛಲ. ಅಹಂಕಾರ ಮತ್ತು ನಾಚಿಕೆ ಇರುವವನು ಎಂದೂ ಕಲಿಯಲಾರ.ಕಲಿಕೆ ಪೂರ್ಣ ವಾಗಿರ ಬೇಕೆಂದರೆ ಇವೆರಡನ್ನೂ ಬಿಡಬೇಕು. ಮತ್ತು ಈ ದುವಾ ಅನ್ನು ಯಾವಾಗಲೂ ಪಠಿಸಬೇಕು "ಅಲ್ಲಾಹನೇ ನನಗೆ ಇನ್ನಷ್ಟು ಜ್ಞಾನವನ್ನು ದಯಪಾಲಿಸು." (ತ್ವಾಹಾ ೧೧೪)
  ಈಗ ನಮ್ಮಲ್ಲಿ ಹೆಚ್ಚಿನ ಜನರು ಶಿಥಿಲವಾಗುತ್ತಿರುವ ಓದು ಸಂಸ್ಕ್ರತಿಗೆ ಪ್ರೋತ್ಸಾಹ ನೀಡುತ್ತಿರುವುದು ಸ್ವಾಗತಾರ್ಹವೇ... ಆದರೆ ಮಕ್ಕಳಿಗೆ ಕೇವಲ ಲೌಕಿಕ ಶಿಕ್ಷಣ ಕೊಟ್ಟರೆ ಮಾತ್ರ ಸಾಲದು ಅದರೊಡನೆ ಧಾರ್ಮಿಕ ಶಿಕ್ಷಣವೂ ಬೇಕು. ಇಂದಿನ ಕಾಲದಲ್ಲಿ ಲೌಕಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವ ಜನರನ್ನು ಕಾಣುತ್ತೇವೆ ನಾವು.ಒಂದು ಮಗುವಿಗೆ ಉತ್ತಮ ಲೌಕಿಕ ಹಾಗೂ ಧಾರ್ಮಿಕ ಶಿಕ್ಷಣ. ಮಾರ್ಗದರ್ಶನ ತರಬೇತಿ ಕೊಟ್ಟರೆ ಮಾತ್ರ ಮಗುವಿನ ಸರ್ವತೋಮುಖ ಬೆಳವನಿಗೆ ಸಾಧ್ಯ. ಇದು ಹೆಚ್ಚಿನ ರಕ್ಷಕರು ಅರ್ಥ ಮಾಡಿಕೊಳ್ಳಬೇಕು. ಮಕ್ಕಳ ಲೌಕಿಕ ಶಿಕ್ಷಣಕ್ಕಾಗಿ ಲಕ್ಷಗಟ್ಟಳೆ ಹಣ ಖರ್ಚು ಮಾಡುವ ರಕ್ಷಕರು ಧಾರ್ಮಿಕ ಶಿಕ್ಷಣಕ್ಕಾಗಿ ಖರ್ಚು ಮಾಡಲು ಹಿಂಜರಿಯಬಾರದು. ಹೆಚ್ಚಿನ ಪೋಷಕರು ಮಕ್ಕಳ ಅಮಿತ ಸಮಯವನ್ನು ಲೌಕಿಕ ಶಿಕ್ಷಣಕ್ಕಾಗಿ ಮಾತ್ರ ಬಳಸುತ್ತಾರೆ. ಇದೇ ಪೋಷಕರು ಮಾಡುವ ಅತೀ ದೊಡ್ಡ ತಪ್ಪು. ದಿನವಿಡೀ ಲೌಕಿಕ ವಿಧ್ಯಾಭ್ಯಾಸಕ್ಕಾಗಿ ಸಮಯ ಮೀಸಲಿಡುವ ಮಕ್ಕಳು ಧಾರ್ಮಿಕ ವಿಧ್ಯಾಭ್ಯಾಸಕ್ಕಾಗಿ ಮೀಸಲಿಡುವುದು ಕೇವಲ ಒಂದೇ ಘಂಟೆಯೆಂದರೆ ಬಹಳ ದೊಡ್ಡ ಸೋಜಿಗವೇ ಸರಿ. ದಿನಕ್ಕೆ ಒಂದು ಗಂಟೆ, ಅದೂ ಐದನೇ ಕ್ಲಾಸ್ ವರೆಗೆ ಮಾತ್ರ ಹೆಚ್ಚೆಂದರೆ ಏಳನೇ ತರಗತಿವರೆಗೆ.. ಅದಕ್ಕಿಂತಾ ಹೆಚ್ಚಾಗಿ ಯಾರೂ ಓದುವುದಿಲ್ಲ.ಯಾರಾದರೂ ಪೋಷಕರಲ್ಲಿ ಮಗಳ ವಿಧ್ಯಾಭ್ಯಾಸದ ಬಗ್ಗೆ ವಿಚಾರಿಸಿದರೆ.. ಮಗಳು ಈಗ ಪಸ್ಟ್ ಇಯರಲ್ಲಿ.. ಮದ್ರಸಾ..? ಎಂದು ಕೇಳಿದರೆ. ಮದ್ರಸಾಕ್ಕೆ ಈಗ ಹೋಗುವುದಿಲ್ಲ.ಐದನೆ ಕ್ಲಾಸ್ ಪೂರ್ತಿಯಾಗಿದೆ. ಇನ್ನೂ ಕಲಿಯಬೇಕೆಂದರೆ ಹೇಗೆ? ಕೈ ಕಾಲು ಬಲಿತಿದೆ ಯಲ್ವಾ? ಇಷ್ಟು ದೊಡ್ಡವಳು ಮದ್ರಸಾಗೆ ಹೋಗುವುದೆಂದರೆ ನಾಚಿಕೆಯ ವಿಷಯವೇ ಸರಿ.ಎಂದು ಮರುತ್ತರ ನೀಡುತ್ತಾರೆ. ಮದ್ರಸಾ ಕಲಿಯುವಾಗ ದೊಡ್ಡವಳೆಂದು ಹೇಳುವ ಅಪ್ಪಂದಿರು ಸ್ಕ್ಲೂಲ್ ಗೆ ಯಾ ಕಾಲೇಜ್ ಗೆ ಕಲಿಸುವಾಗ ಮಾತ್ರ ದೊಡ್ಡವಳಾಗದಿರುವುದು ವಿಶೇಷ. ಇಂತಹಾ ಸ್ಥಿತಿಯಲ್ಲಿ ಒಂದು ಸ್ವಸ್ಥ ಸಮಾಜ, ಸ್ವಸ್ಥ ಕುಟುಂಬ ಕನಸಿನ ಮಾತೇ ಸರಿ.
  ಇಂತಹಾ ಮಕ್ಕಳ ಮನೋವಿಕಾಸ ಮತ್ತು ವ್ಯಕ್ತಿತ್ವ ಜ್ಞಾನ ಅರಳುವ ಬದಲು ಮುರುಟುವ ಒರಟಾಗಿ ಬಿಡುವ ಅಪಾಯವಿದೆ. ಅಥವಾ ಶಿಕ್ಷಣ ಸುರಕ್ಷೆ ಆಗುವುದರ ಬದಲು ಶಿಕ್ಷೆ ಆಗಿಬಿಡುವ ಅಪಾಯವೂ ಇದೆ. ಇದಕ್ಕೆ ಇತ್ತೀಚಿಗೆ ನಡೆಯುತ್ತಿರುವ ವಿಧ್ಯಾಮಾನವೇ ಸಾಕ್ಷಿ, ಆದರೆ ಇದಕ್ಕೆಲ್ಲಾ ಹೊಣೆ ಪೋಷಕರೇ..ಸಾಧಾರಣವಾಗಿ ಪೋಷಕರು ಅತೀ ಕಡಿಮೆ ಕೆಲಸ ಮಾಡಿ, ಅತೀ ಕಡಿಮೆ ಸಮಯದಲ್ಲಿ ಅತೀ ಹೆಚ್ಚು ಹಣ ಗಳಿಕೆ , ಕೋಟಿ ಕೋಟಿ ಸಂಪಾದಿಸುವುದು ಹೇಗೆ? ಯಾವುದು ಕಲಿತರೆ ಹೆಚ್ಚು ಹಣ ಸಂಪಾದಿಸಬಹುದು.? ಎಂಬ ಚಿಂತೆಯಲ್ಲೇ ಅಂತಹದ್ದೊಂದು ಗುರಿಯನ್ನೇ ಮಕ್ಕಳ ಮನಸ್ಸಿಗೆ ತುರುಕಿ ಬಿಡುತ್ತಾರೆ.ಮಕ್ಕಳೂ ಪೋಷಕರು ತಲೆಗೆ ತುಂಬಿದನ್ನೇ ಅನುಸರಿಸುತ್ತಾ , ಮುಂದೊಂದು ದಿನ ಅವರಿಗೇ ಎದುರುತ್ತರ ಕೊಡುವಷ್ಟರ ಮಟ್ಟಿಗೆ ಬೆಳೆಯುತ್ತಾರೆ. ಮುಂದೆ ತಂದೆ ತಾಯಂದಿರು ಅವರಿಗೆ ಮುದಿ ಗೂಬೆ ಗಳಾಗುತ್ತಾರೆ.ಕೆಲಸಕ್ಕೆ ಬಾರದವರಾಗುತ್ತಾರೆ.ಅವರನ್ನು ವ್ರದ್ಧಾಶ್ರಮಕ್ಕೋ ಅಥವಾ ಮನೆಯಿಂದ ಹೊರಕ್ಕೋ ಅಟ್ಟಿ ಬಿಡುತ್ತಾರೆ. ಇದು ಇಂದಿನ ಸಮಾಜದಲ್ಲಿ ನಮ್ಮ ಕಣ್ಣಾರೆ ಕಾಣುವ ದುರಂತಗಳು. ಆದರೆ ಇಂತಹಾ ಸಮಯದಲ್ಲಿ ಮಕ್ಕಳಿಗೆ ಲೌಕಿಕ ಶಿಕ್ಷಣದೊಡನೆ ಧಾರ್ಮಿಕ ಶಿಕ್ಷಣವೂ ಕೊಟ್ಟರೆ ಎಂದೂ ಇಂತಹಾ ಪ್ರಸಂಗ ಎದುರಾಗಲು ಸಾಧ್ಯತೆಯೇ ಇರುವುದಿಲ್ಲ. ಬದಲಾಗಿ ಗುರು ಹಿರಿಯರನ್ನು ಪ್ರೀತಿಸಲು ಕಲಿಯುತ್ತಾರೆ.ಗುರು ಹಿರಿಯರು , ಮಾತಾ ಪಿತರೆಂದರೆ ಸ್ವರ್ಗ ಅನ್ವೇಷಿಸಲು ಇದೊಂದು ಸುಸಮಯ ಎಂದೆನ್ನು ಕೊಳ್ಳುತ್ತಾರೆ. ಆದರೆ ನಮ್ಮಲ್ಲಿ ಇಂತಹಾ ಜನರಿರುವು ಬಹಳಷ್ಟು ವಿರಳ ವೆಂದೇ ಹೇಳಬೇಕು.
  ಇಂದು ನಮ್ಮ ಸಮೂಹ ದತ್ತ ಒಮ್ಮೆ ಕಣ್ಣಾಡಿಸಿ ನೋಡಿದರೆ ಇದರ ಸ್ಥಿತಿ ಗತಿ ಗಳು ನಮಗೆ ಕಾಣಸಿಗಬಹುದು. ಹೆಚ್ಚಿನ ಜನರಿಗೆ ಕುರ್‌ಆನ್ (ತಜ್ ವೀದ್ ನೊಡನೆ)ಸರಿಯಾಗಿ ಓದಲು ಹರಫ್ ಗಳನ್ನು ಉಚ್ಚಾರಿಸಲು ತಿಳಿದಿಲ್ಲ ಇದರ ಬಗ್ಗೆ ಖೇದವೂ ಇಲ್ಲ. ಅಥವಾ ಕಲಿಯಬೇಕೆನ್ನುವ ಉಮೇದು ಅವರಲ್ಲಿಲ್ಲ. ನಮಾಜಿನ ಶರ್ತ್ ಫರ್ಳ್ ಗಳು ತಿಳಿದಿಲ್ಲ. ನಮಾಜನ ಮಹತ್ವದ ಕುರಿತು ಅರಿವಿಲ್ಲ.ಹೆಚ್ಚಿನ ಜನರು ತಮ್ಮ ತಮ್ಮ ಕೆಲಸ ಕಾರ್ಯಗಳ ನಡುವೆ ಬಿಝಿಯಾಗಿ, ಇದನ್ನೆಲ್ಲಾ ಚಿಂತಿಸುವದನ್ನು ಕೂಡಾ ಮರೆತು ಬಿಟ್ಟಿದ್ದಾರೆ.ಎಂಬುವುದು ದುಃಖಕರ ಸಂಗತಿಯೇ ಹೌದು.ಇದಕ್ಕೆಲ್ಲಾ ಕಾರಣ ಏನು? ಹೊಣೆ ಯಾರದ್ದು?? ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ. ಉತ್ತರ ಇನ್ನೆಲ್ಲೋ ಸಮಾಧಿಯಲ್ಲಿ ಆಕಳಿಸಿ ತನ್ನ ಮಗ್ಗುಲು ಬದಲಾಯಿಸುತ್ತದೆ. ಮನುಷ್ಯ ಮಾತ್ರ ಇದು ತನಗೆ ಸಂಭದಿಸಿದ್ದೇ ಅಲ್ಲವೇನೋ ಎಂಬಂತೆ ನಿರ್ಲಿಪ್ತನಾಗಿದ್ದಾನೆ.
  posted by ASHRAF @ 7:16 AM   0 comments
  ಕಾಲದ ಅತೀ ಅಗತ್ಯದ ಬೇಡಿಕೆ. . . . .
  Wednesday, June 10, 2009
  ಜಗತ್ತಿಂದು ಆಧುನಿಕತೆಯತ್ತ ನಾಗಲೋಟ ಕ್ಕೋಡುತ್ತಿರುವಾಗ.. ಇತರ ವರ್ಗಗಳಿಗಿಂತ ಎಷ್ಟೋ ಮೇಲ್ಪಟ್ಟ ಶ್ರೇಷ್ಟ ವರ್ಗದ ಮಾನವ ಕೂಡಾ.. ಭರದಿಂದ ಆಧುನಿಕತೆಯತ್ತ ದಾಪುಗಾಲಿಡುತ್ತಿದ್ದಾನೆ. ಜೊತೆಗೆ ಅಹಂಕಾರ, ಸ್ವಾರ್ಥ, ದುರಾಸೆ, ದುಷ್ಟ ಚಿಂತನೆಗಳಿಂದ, ಮಾನವ ಅಧಪತನಕ್ಕೆ ಜಾರುತ್ತಾ, ತನ್ನನ್ನು ಸೃಷ್ಟಿಸಿದ ಮೂಲ ಉದ್ದೇಶವನ್ನೇ ಮರೆತು..ಸೃಷ್ಟಿ ಕರ್ತನನ್ನೇ ಮರೆತು ಬಿಡುವಷ್ಟು ಅಪಾಯದ ಅಂಚಿನಲ್ಲಿ ಬಂದು ನಿಂತಿದ್ದಾನೆ. ಹಣ, ಆಸ್ತಿ, ಅಂತಸ್ತು, ಎಂದು ಶೇಖರಿಸಿಡುತ್ತಾ ತನ್ನೆಲ್ಲಾ ಅಮೂಲ್ಯ ಸಮಯವನ್ನು ಕೇವಲ ಈ ಇಹ ಜೀವನಕ್ಕೆ ಮಾತ್ರ ಮೀಸಲಿಟ್ಟಿದ್ದಾನೆ. ಈ ಜೀವನ ನಶ್ವರ ಎಂದು ಗೊತ್ತಿದ್ದು ಕೂಡಾ..ಮನುಷ್ಯ ಅದರ ಬೆನ್ನ ಹಿಂದೆಯೇ ಬಿದ್ದಿರುವುದು ಬಹಳ ಖೇದಕರ ಸಂಗತಿ.ಆದರೆ ಇಹ ಜೀವನಕ್ಕೆ ಬೇಕಾಗಿ ಎಂತಹಾ ಕ್ಲಿಷ್ಟಕರವಾದ ಸಾಹಸಕ್ಕೆ ಬೇಕಾದರೂ, ಮುಂದಾಗುವ ಮಾನವ, ಪರಲೋಕದ ಬಗ್ಗೆ ಅಜ್ಙಾನ ನಾಗಿರುವುದು. ಮನುಷ್ಯ ಸಮುದಾಯದ ಬಹಳ ದೊಡ್ಡ ದುರಂತವೇ ಸರಿ.ಈ ಶಾಶ್ವತವಲ್ಲದ ದುನ್ಯಾ ಕ್ಕಾಗಿ ಹರಸಾಹಸ ಪಟ್ಟು ಶೇಖರಿಸಿಡುವ ಮನುಷ್ಯ ತನ್ನ ಪರಲೋಕದ ಖಜಾನೆ ತುಂಬುವಲ್ಲಿ ಮಾತ್ರ ಎಡವಿ ಬಿದ್ದಿರುತ್ತಾನೆ. ಅಲ್ಲಾಹ್ ಹೇಳುತ್ತಾನೆ. ಸತ್ಯ ವಿಶ್ವಾಸಿಗಳೇ ಅಲ್ಲಾಹನನ್ನು ಭಯ ಪಡಿರಿ ಮತ್ತು ಪ್ರತೀ ಯೊಬ್ಬನು ತಾನು ನಾಳೆಗಾಗಿ ಏನನ್ನು ಸಿದ್ಧಪಡಿಸಿಟ್ಟುರು ವೆನೆಂಬುದನ್ನು ನೋಡಿ ಕೊಳ್ಳಲಿ, ಅಲ್ಲಾಹನನ್ನು ಭಯಪಡುತ್ತಲಿರಿ, ನಿಶ್ಚಯವಾಗಿಯೂ ನೀವು ಮಾಡುತ್ತಲಿರುವ ಸಕಲ ಕರ್ಮಗಳನ್ನು ಅಲ್ಲಾಹನು ಬಲ್ಲವನಾಗಿರುತ್ತಾನೆ. ಅಲ್ ಹಶ್ರ್-೧೮ ಇಂದು ಮುಸ್ಲಿಮರು ಎಲ್ಲಾ ರಂಗಗಳಿಲ್ಲಿಯೂ ಬಹಳಷ್ಟು ಹೊಡೆತ ತಿನ್ನುತ್ತಿದ್ದಾರೆ. ಕೊಲೆ, ಸುಲಿಗೆ, ಬಾಂಬ್ ಸ್ಪೋಟ, ಇಂತಹಾ ಯಾವುದೇ ಅಮಾನುಷ ಘಟನೆಯಲ್ಲಿಯೂ ಮುಸ್ಲಿಮರನ್ನೇ ಅಪರಾಧಿಗಳೆಂದು, ಭಯೋತ್ಪದಕರೆಂದೂ, ಚಿತ್ರೀಕರಿಸಲಾಗುತ್ತದೆ. ಇದಕ್ಕೆಲ್ಲಾ ಕಾರಣ ಮುಸ್ಲಿಮರೇ.. ಇಂದಿನ ಮುಸ್ಲಿಮರು ಕೇವಲ ನಾಮಧಾರಿ ಮುಸ್ಲಿಮರಾಗಿದ್ದಾರೆ. ಅವರಿಗೆ ಧರ್ಮವೆಂದರೇನು? ಧರ್ಮದ ತಿರುಳೇನು? ಅದರ ನೈಜತೆಯೇನು? ಎಂದು ತಿಳಿದಿಲ್ಲ, ಕುರ್‌ಆನಿನ ಬಗ್ಗೆ ಅರಿವಿಲ್ಲ.. ಹದೀಸಿನ ಕುರಿತು ಒಂಚೂರು ಜ್ಙಾನವಿಲ್ಲ...ಮೂಢ ನಂಬಿಕೆ ಅನಾಚಾರ ಗೊಡ್ಡು ಸಂಪ್ರದಾಯದಗಳಿಗೆ ಇಂದಿನ ಮುಸ್ಲಿಮರು ಹೆಚ್ಚಾಗಿ ಬಲಿ ಬೀಳುತ್ತಿದ್ದಾರೆ. ಹೀಗಾಗಿಯೇ ಇಂದಿನ ಮುಸ್ಲಿಮರು ಬಹಳಷ್ಟು ದೊಡ್ಡ ಹೊಡೆತ ತಿನ್ನಲು ಕಾರಣ.ಸುಮಾರು ೫೦೦ ವರ್ಷ ಗಳ ಮುಂಚೆ ಮುಸ್ಲಿಮೇತರಗಿಂತ ಮುಸ್ಲಿಮರು ಶೈಕ್ಷಣಿಕ ವ್ಯಾಪಾರ ವಿಜ್ಙಾನ ಭೋಧನಾ ರಂಗ ಹೀಗೆ ಎಲ್ಲದರಲ್ಲಿಯೂ ಬಹಳಷ್ಟು ಮುಂಚೂಣಿಯಲ್ಲಿದ್ದರು.ಯಾವೊಂದು ಸಮಸ್ಯೆಗೂ ಕುರ್‌ಆನ್ ಹದೀಸಿನ ಆಧಾರದಲ್ಲಿ ಪರಿಹಾರ ಕಂಡು ಕೊಳ್ಳುತ್ತಿದ್ದರು.ಆದರೆ ಈಗ ಮುಸ್ಲಿಮರಿಗಿಂತ ಮುಸ್ಲಿಮೇತರರು ಬಹಳ ಮುಂದಿದ್ದಾರೆ.ಮುಸ್ಲಿಮರ ಕೈಯಲ್ಲಿ ಕುರ್‌ಆನ್ ಹದೀಸ್ ಗಳೆಂಬ ಶಕ್ತವಾದ ಆಯುಧವಿದ್ದರೂ ಬಹಳಷ್ಟು ಹಿಂದುಳಿಯಲು ಕಾರಣ ಕುರ್‌ಆನಿನ ಪ್ರಯೋಜನ ಮುಸ್ಲಿಮರು ಪಡೆಯದಿರುತ್ತಿರುವುದು. ಅದರ ಕುರಿತು ಎಳ್ಳಷ್ಟೂ ಜ್ಙಾನ ವಿಲ್ಲದಿರುವುದು. ಹಿಜ್‌ರಾ ೧೦ನೇ ವರ್ಷದ ದುಲ್ ಹಜ್ಜ್ ೯ ನೇ ದಿನ ಮಕ್ಕಾದ ಅರಫಾ ಮೈದಾನದಲ್ಲಿ ಅಂತಿಮ ಪ್ರವಾದಿ ಮುಹಮ್ಮದ್ ಸ.ಅ ಹೇಳಿದ್ದರು.ಓ ಮನುಷ್ಯರೇ ...ನಾನು ಈ ವರ್ಷದ ನಂತರ ನಿಮ್ಮೊಂದಿಗೆ ಇರುವೆನೆಂದು ನನಗೆ ಗೊತ್ತಿಲ್ಲ ಆದುದರಿಂದ ನಾನು ಹೇಳುವುದನ್ನು ನೀವು ಬಹಳ ಜಾಗ್ರತೆಯಿಂದ ಗಮನವಿಟ್ಟು ಆಲಿಸಿರಿ.ಹಾಗೂ ಈ ನುಡಿಗಳನ್ನು ಇಲ್ಲಿ ಹಾಜರಿದ್ದವರು ಹಾಜರಿಲ್ಲ ದವರಿಗೆ ತಲುಪಿಸಿ. ಹಾಗೆಯೇ ಆ ಕರೆಗೆ ಓ ಗೊಟ್ಟು, ಅದರಂತೆ ನಮ್ಮ ಪೂರ್ವಜರು ಆ ದೀನನ್ನು ನಮಗೆ ತಲುಪಿಸಿದ್ದಾರೆ. ಆದರೆ ನಾವೋ ಪರಿಶೀಲನಾತ್ಮಕವಾಗಿ ನಮಗೆ ನಾವೇ ಆತ್ಮ ವಿಮರ್ಶೆ ಮಾಡಿ ನೋಡಿದರೆ ಅಲ್ಲಿ ಉತ್ತರ ಸಿಗುತ್ತಿಲ್ಲ.ಇಲ್ಲ ನಾವು ಹೀಗಾಗಬಾರದು, ನಾವು ಕಲಿತ ಒಂದು ಆಯತೋ, ಅಥವಾ ಒಂದು ಹದೀಸಾದರೂ ,ಇನ್ನೊಬ್ಬರಿಗೆ ಹೇಳಿ ಕೊಡುವ ಸದ್ಬುದ್ಧಿ ಬೆಳೆಸಬೇಕು. ಇಲ್ಲದಿದ್ದಲ್ಲಿ ಇಂದು ಸತ್ಯವನ್ನು ಉಳ್ಕೊಲ್ಲದ, ಇಸ್ಲಾಮ್ ಏನೆಂದು ಅರಿಯದ, ಅಲ್ಲಹನ ಬಗ್ಗೆ ತಿಳಿಯದ, ಮುಹಮ್ಮದ್ ನೆಬಿ{ಸ.ಅ} ರವರ ಪರಿಚಯವಿಲ್ಲದ, ನಮಗಿಂದು ಪರಿಚಯ ವಿರುವ ಪ್ರತೀಯೊಬ್ಬ ವ್ಯಕ್ತಿಯು, ನಾಳೆ ಮಹ್‌ಶರ ಮೈದಾನದಲ್ಲಿ ಅಲ್ಲಾಹನ ಮುಂದೆ ನಮ್ಮಲ್ಲಿಗೆ ಕೈ ತೋರಿಸಿ ಅಲ್ಲಾಹನೇ ಇವನ ಪರಿಚಯ ನನಗಿತ್ತು,ಆದರೆ ನಿನ್ನ ಬಗ್ಗೆ ಒಂದಿಷ್ಟೂ ಹೇಳಿ ಕೊಡದೆ ನನ್ನನ್ನು ವಿನಾಶದಂಚಿಗೆ ತಳ್ಳಲು ಸಹಾಯಕನಾದ ಇವನನ್ನೂ ನನ್ನ ತಾಣಕ್ಕೆ ಸೇರಿಸೆಂದು ತನ್ನೊಡನೆ ಎಳೆದೊಯ್ಯುವ ಆ ದುಸ್ಥಿತಿ ನಮಗೆ ಬರಬಾರದು.ನಮ್ಮಯ ನಾಳೆಯ ರಕ್ಷೆಗಾಗಿ ನಾವಿಷ್ಟಾದರೂ ಮಾಡದಿದ್ದರೆ, ನಾವು ಮುಸ್ಲಿಮರಾಗಿ ಏನು ಪ್ರಯೋಜನ, ಇಲ್ಲ ನಾವು ಬದಲಾಗಬೇಕು. ನಾವು ಮುಸ್ಲಿಮರೆಂಬ ಚಲನೆ ನಮ್ಮಲ್ಲುಂಟಾಗಬೇಕು, ಧರ್ಮ ವೆಂದರೇನು? ಧರ್ಮದ ನೀತಿ ನಿಯಮಗಳೇನು? ಧರ್ಮದ ನೈಜ ಉದ್ದೇಶವೇನೆಂದು? ಕುರ್‌ಆನ್ ಸುನ್ನತ್ತಿನ ಆಧಾರದಲ್ಲಿ ಅರಿವಿಲ್ಲದವರಿಗೆ ಇದನ್ನು ತಿಳಿಸಿ ಕೊಡಬೇಕು, ಅದಲ್ಲದೆ ಇಸ್ಲಾಮ್ ಸಾಹೋದರ್ಯತೆಗೆ ನೀಡಿದ ಮಹತ್ವ ಮನುಷ್ಯ ಜಗತ್ತಿಗೇ ಮಾದರಿಯಾದುದು. ಓರ್ವ ಇಲಾಹನಲ್ಲಿ ವಿಶ್ವಾಶವಿಟ್ಟು, ಒಂದು ಧರ್ಮವನ್ನು ಆಚರಿಸುತ್ತಾ, ಒಬ್ಬ ನಾಯಕರನ್ನು{ಮುಹಮ್ಮದ್ ನೆಬಿ ಸ. ಅ} ಅನುಸರಿಸುತ್ತಾ ಬದುಕುವ ಮುಸ್ಲಿಮರು ಒಂದು ಕುಟುಂಬದಂತೆ ವರ್ತಿಸಬೇಕೆಂದು, ಅವರೆಲ್ಲರೂ ಪರಸ್ಪರ ಸಹೋದರರೆಂದೂ ಇಸ್ಲಾಮ್ ಆದೇಶಿಸಿರುವುದನ್ನು ಇಂದಿನ ಯುವ ಪೀಳಿಗೆಗೆ ತಿಳಿಸಿ ಕೊಡುವುದು ಅತೀ ಅಗತ್ಯವಾಗಿದೆ. ಇಲ್ಲದಿದ್ದಲ್ಲಿ ಮುಂದೊಂದು ದಿನ ಮುಸ್ಲಿಮರು ಅಧಪತನಕ್ಕೆ ತಳ್ಳಲ್ಪಡುವ ಅಥವಾ ನಿರ್ನಾಮ ವಾಗುವ ದಿನ ದೂರವಿಲ್ಲವೆಂದೆನಿಸುತ್ತದೆ.ಅದಕ್ಕಾಗಿ ಮುಸ್ಲಿಮರೆಲ್ಲರೂ ಹೆಚ್ಚು ಕ್ರಿಯಾಶೀಲರಾಗಿ, ಒಗ್ಗಟ್ಟಾಗಿ, ಇಸ್ಲಾಮಿನ ಆಶಯ, ಆದರ್ಶಗಳನ್ನು, ಮನುಷ್ಯ ಸಮುದಾಯಕ್ಕೆ ತಿಳಿಸಿ ಕೊಡಬೇಕಾದುದು ಕಾಲದ ಅತೀ ಅಗತ್ಯವಾದ ಬೇಡಿಕೆಯಾಗಿದೆ.
  posted by ASHRAF @ 6:24 AM   0 comments
  ಎಲ್ಲವೂ ನಿನ್ನದೆ.॒ . . . . . !
  Monday, June 8, 2009
  ಆಕಾಶವೂ ನಿನ್ನದೆ
  ಭೂಮಿಯು ನಿನ್ನದೆ
  ಗಾಳಿಯು ನಿನ್ನದೆ
  ಬೆಳಕೂ ನಿನ್ನದೆ
  ನೀನೇ ಸ್ತುತ್ಯರ್ಹನು
  ನೀನೇ ನಿರಪೇಕ್ಷಕನು

  ಜನನವು ನಿನ್ನದೆ
  ಮರಣವು ನಿನ್ನದೆ
  ಆತ್ಮವು ನಿನ್ನದೆ
  ಶರೀರವು ನಿನ್ನದೆ
  ನೀನೇ ಯುಕ್ತಿಪೂರ್ಣನು
  ನೀನೇ ಪ್ರಬಲನು

  ಹಗಲೂ ನಿನ್ನದೆ
  ಇರುಳೂ ನಿನ್ನದೆ
  ಸೂರ್ಯವು ನಿನ್ನದೆ
  ಚಂದ್ರವು ನಿನ್ನದೆ
  ನೀನೇ ಸರ್ವಶ್ರುತನೂ
  ನೀನೇ ಸರ್ವವೀಕ್ಷಕನೂ

  ಸತ್ಯವು ನಿನ್ನದೆ
  ಸಹಾಯವು ನಿನ್ನದೆ
  ಸರ್ವವು ನಿನ್ನದೆ
  ಸಕಲವು ನಿನ್ನದೆ
  ನೀನೇ ಸಾಮ್ರಾಟನು
  ನೀನೇ ಸರ್ವಜ್ಞನು

  ಕಲ್ಲೂ ನಿನ್ನದೆ
  ಮಣ್ಣೂ ನಿನ್ನದೆ
  ಸೃಷ್ಟಿಯು ನಿನ್ನದೆ
  ದೃಷ್ಟಿಯು ನಿನ್ನದೆ
  ನೀನೇ ಮಹಾನನು
  ನೀನೇ ಮಹಿಮನು

  ವಿಶ್ವವು ನಿನ್ನದೆ
  ವಿಶಾಲವು ನಿನ್ನದೆ
  ಆರಾಧನೆಯು ನಿನಗೆ
  ಅರ್ಪಣೆಯು ನಿನಗೆ
  ನೀನೇ ಅಲ್ಲಾಹ್
  ನೀನೇ ಸರ್ವ ಪಾಲಕ ಪ್ರಭು
  posted by ASHRAF @ 6:07 AM   0 comments
  kathe
  ಹುಚ್ಚ  ಆಕಾಶವೆಲ್ಲ ದಟ್ಟ ಮೋಡಗಳಿಂದೊಡ ಗೂಡಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಮಳೆ ಬರಬಹುದು, ಎನ್ನುವಂತಿತ್ತು.ಗಾಳಿ ತನ್ನ ಒಡಳೊಳಗೆ ಚಳಿಯನ್ನು ತುಂಬಿಕೊಂಡು ಬೀಸುತಿತ್ತು.ಮನ ನನ್ನೆಲ್ಲಾ ಆಶೋತ್ತರಗಳನ್ನು
  ಬುಡ ಮೇಲು ಮಾಡಿದ್ದರೂ, ನಾನು ನನ್ನ ನಡಿಗೆಯಲ್ಲಿ ಚುರುಕು ತುಂಬಿಸುತ್ತಾ,ಹೆಜ್ಜೆಯ ವೇಗವನ್ನು
  ಹೆಚ್ಚಿಸಿದೆ.
  ಇನ್ನೂ ಒಂದೆರಡು ಮನೆಗಳಿಗೆ ಅಲೆದಾಡಿದರೆ, ಹತ್ತೋ ಇಪ್ಪತ್ತೋ ಜಾಸ್ತಿ ಸಿಗಬಹುದೆಂಬ
  ಹುಚ್ಚು ಆಲೋಚನೆಯು ನನ್ನ ನಡಿಗೆಯ ವೇಗವನ್ನು ಹೆಚ್ಚಿಸಿತು.ಊರುಗೋಲನ್ನು ನೆಲಕ್ಕೆ ಊರಿಕೊಂಡು ಒಂಟಿ
  ಕಾಲಿನಲ್ಲಿ ವೇಗವಾಗಿ ನಡೆಯುತ್ತಿದ್ದೆ. ಕೈ ಇವತ್ತಿನ ಅಲೆದಾಟದಾಟದಲ್ಲಿ ಸಿಕ್ಕಿದ ಹಣವನ್ನು ಮೆಲ್ಲನೆ
  ಅಪ್ಯಾಯಮಾನತೆಯಿಂದ ಕಿಸೆಯನ್ನು ಸವರುತಿದ್ದವು,
  ಬೆಳಿಗ್ಗೆಯಿಂದ ಸಂಜೆಯವರೆಗೂ ಅಲೆದಾಡಿದರೂ ಹಣ ಮಾತ್ರ ಇನ್ನೂ ನೂರೈವತ್ತು
  ದಾಟಿರಲಿಲ್ಲ, ಮದುವೆಗೆ ಕೇವಲ ಇನ್ನು ಏಳೆಂಟು ದಿನ ಬಾಕಿಯಿದ್ದರೂ ವರದಕ್ಷಿಣೆ ಹಣ ಇನ್ನೂ
  ಹೊಂದಿಸಲಿಕ್ಕೆ ಆಗದಿರುವ ನನಗೆ ನನ್ನ ಮೇಲೆಯೇ ಜಿಗುಪ್ಸೆಯಾಗುತಿತ್ತು, ಛೆ..: ನಾನೀಗ ಏನು ಮಾಡಲಿ. .?
  ಹೇಗೆ ನಾನು ಈ ಒಂದು ಲಕ್ಷವನ್ನು ಹೊಂದಿಸಲಿ.? ನನ್ನ ಮಗಳ ಮದುವೆಯನ್ನು ಹೇಗೆ ಸಮರ್ಪಕವಾಗಿ
  ನಿರ್ವಹಿಸಲಿ ನಾನು.?ಮನದೊಳಗೆ ಭಯಂಕರವಾದ ಅಲೋಚನೆಗಳ ಅಗ್ನಿ ಶಿಲೆಗಳು ಅಸ್ಪೋಟಿಸ
  ತೊಡಗಿದ್ದವು.
  ?ಕಾಲುಗಳು ಮನದ ಬೇಗುದಿಯನ್ನು ಸಹಿಸಲಾರದೆ ಇನ್ನು ನಡೆಯಲಾರೆನೆಂದು ಮುಷ್ಕರ ಹೂಡುತ್ತಿದ್ದವು.ಊರುಗೋಲನ್ನು ಬದಿಗಿಟ್ಟು ಆ ದೊಡ್ಡದಾದ ಆಲದ ಮರದಡಿಯಲ್ಲಿ ಕುಸಿದು ಕುಳಿತಿದ್ದೆ, ಎದೆಯಲ್ಲಿ ದುಃಖದ ಲಾವಾರಸ ಕೊತಕೊತನೆ ಕುಣಿಯುತಿದ್ದವು. ಮನದಲ್ಲಿ ಮಗಳ ಬದುಕಿನ ಕರಾಳತೆ ನನ್ನ ಕಣ್ಣ ಮುಂದೆ ಕುಣಿಯುತಿದ್ದವು.
  ಏನು. . ಏನು. ಮಾಡಲಿ ನಾ?॒ ಮಗಳ ಮದುವೆಯನ್ನು ಹೇಗೆ ನಿರ್ವಿಘ್ನವಾಗಿ ನೆರವೇರಿಸಲಿ . . . ?ಇದಕ್ಕಾಗಿ ಎಷ್ಟೊಂದು ಮನೆ ಮನೆಗೆ ಅಲೆದಾಡಿ ಅವರಿವರ ಕುಹಕ ನುಡಿ , ಉರಿ ನೋಟ, ಎಲ್ಲವನ್ನೂ ಸಹಿಸಿ ದೇಹವನ್ನು ಮುಷ್ಟಿಯಲ್ಲಿಡಿದು ಕೈ ಚಾಚಿ ಬೇಡಿದರೂ ಹಣ ಮಾತ್ರ ಇನ್ನೂ ಐವತ್ತು ಸಾವಿರವನ್ನು ದಾಟಿರಲಿಲ್ಲ, ಒಂದು ಲಕ್ಷಕ್ಕೆ ಇನ್ನೂ ಐವತ್ತು ಸಾವಿರ ಬಾಕಿ ಇತ್ತು. ಇನ್ನು ನಾ ಈ ಐವತ್ತು ಸಾವಿರವನ್ನು ಹೇಗೆ ಹೊಂದಿಸಲಿ.? ಎಂಬ ಪ್ರಶ್ನೆ ಯಕ್ಷವಾಗಿಯೇ ನನ್ನ ಕಣ್ಣ ಮುಂದೆ ಗಿರಿಗಿಟ್ಟಿಯಾಗಿ ತಿರುಗುತಿದ್ದವು. ಇನ್ನು ಈ ಹಣಕ್ಕಾಗಿ ನಾ ಯಾರ ಕಾಲು ಹಿಡಿಯಲಿ . . ? ಎಂದು ಅಸಹಾಯ ಕತೆಯಿಂದ ಕೈ ಚೆಲ್ಲಿ ಕುಳಿತಿದ್ದೆ ನಾನು. ಕಣ್ಣಲ್ಲಿ ಅಶ್ರು ಹನಿಗಳು ಬಿಂದು ಬಿಂದಾಗಿ ಹರಿಯ ತೊಡಗಿ ನನ್ನ ಅಸಹಾಯ ಕತೆಯನ್ನು ಎತ್ತಿ ತೋರಿಸುತ್ತಿದ್ದವು.
  ವರದಕ್ಷಿಣೆ ಈ ಅನಿಷ್ಟ ಪದ್ಧತಿಯನ್ನು ಯಾರು ಜಾರಿಗೆ ಗೊಳಿಸಿದರೋ ಏನೋ? ಒಂದು ಹೆಣ್ಣು ಮತ್ತು ಗಂಡು ಸಂಸಾರ ಹೂಡಲು ಸೇತುವೆಯಾಗಬೇಕು. ಅದು ಬಿಟ್ಟು ಮದುವೆ ಇನ್‌ಸ್ಟಾಲ್ ಮೆಂಟ್ ಮಟ್ಟಕ್ಕಿಳಿದಿರುವುದು ಯಾವುದರ ಪ್ರತಿಬಿಂಬ ವಿರಬಹುದು ಇದು . .? ನಮ್ಮ ಜನ ನೈತಿಕತೆ ಕಳೆದು ಕೊಳ್ಳುತ್ತಿದ್ದಾರ. . .? ಅರ್ಥವಾಗಲಿಲ್ಲ ನನಗೆ,
  ಅದೆಷ್ಟೋ ಹೊತ್ತು ಅದೇ ಭಂಗಿಯಲ್ಲಿ ಕುಳಿತು ಯೋಚಿಸುತ್ತಿದ್ದೆ ನಾನು. ಮುಖಕ್ಕೆ ಮಳೆ ಹನಿಯೊಂದು ತಟ್ಟಕ್ಕನೆ ಮುತ್ತಿಟ್ಟಾಗ ತಟ್ಟನೆ ಯೋಚನೆಯಿಂದ ಹೊರಬಂದು ಊರುಗೋಲನ್ನೆತ್ತಿ ಮೆಲ್ಲನೆ ನಿಧಾನವಾಗಿ ಸೋತ ನಡಿಗೆಯಲ್ಲಿ ಮನೆಯ ಕಡೆ ಹೆಜ್ಜೆ ಹಾಕುತ್ತಿದ್ದೆ. ಮನದಲ್ಲಿ ತಾಯಿಯ ಆಸರೆಯಿಲ್ಲದೆ ಬೆಳೆದ ನನ್ನ ಮಗಳ ಮುಖ ಪದರ ಪದರವಾಗಿ ಮೂಡಿ ಬರುತ್ತಿತ್ತು, ಜೊತೆಗೆ ವೇದನೆ ಕೂಡ ಮನದಲ್ಲಿ ಮಡುಗೊಟ್ಟತೊಡಗಿತ್ತು.
  ಏಯ್.. ವರದಕ್ಷಿಣೆ ಹಣ ಇಲ್ಲಿಡು.; ನಂತರ ನಿಕಾಹ್ . ವರನ ತಂದೆಯ ಗಜ ಗಾಂಭಿರ್ಯ ನುಡಿ ಕೇಳಿ ಬೆಚ್ಚಿ ಬಿದ್ದಿದ್ದೆ ನಾನು, ಕೈಯಲ್ಲಿದ್ದ ಐವತ್ತು ಸಾವಿರವನ್ನು ಅವರ ಕೈಯಲ್ಲಿಡುತ್ತಾ ನನ್ನನ್ನು ಕ್ಷಮಿಸಿ ಬಿಡಿ ಕಾಸಿಮಾಕ ಎಷ್ಟು ಹೆಣಗಾಡಿದರೂ ನೀವು ಕೇಳಿದಷ್ಟು ಮೊತ್ತವನ್ನು ಕೊಡಲಿಕ್ಕಾಗಲಿಲ್ಲ. ಇನ್ನೊಂದೆರಡು ತಿಂಗಳು ಟೈಮ್ ಕೊಡಿ ಅಷ್ಟರಲ್ಲಾಗಲೇ ನಿಮ್ಮ ಬಾಕಿ ಮೊತ್ತವನ್ನು ಪಾವತಿಸಿ ಬಿಡುತ್ತೇನೆ. ದೇಹವನ್ನು ಬಿಗಿ ಹಿಡಿದು ಅಷ್ಟು ಜನರೆದುರಲ್ಲಿ ಇಷ್ಟು ಉಸಿರಿದ್ದೇ ಹೆಚ್ಚು ನಾನು... . .
  ಲೇಯ್.. ಮೂರ್ಖ ಶಿಖಾಮಣಿ ಈ ನಿನ್ನ ಜುಜುಬಿ ಐವತ್ತು ಸಾವಿರ ನಮಗೆ ಬೇಕಾಗಿಲ್ಲ ಕಣೋ. ನಾವೇನು ನಿನ್ನ ಹತ್ತಿರ ಗತಿ ಗೆಟ್ಟು ಬಂದಿದ್ದೇವೆಯಾ..? ಕೇವಲ ಒಂದು ಲಕ್ಷ ಕೊಡಲಿಕ್ಕಾಗದವನು ಈ ಮದುವೆಗೆ ಯಾಕೆ ಒಪ್ಪಿಕೊಂಡದ್ದು.? ಎಂದೆನ್ನುತ್ತಾ ನನ್ನ ಹಣವನ್ನು ನನ್ನ ಮುಖದ ಮೇಲೆಯೇ ಬಿಸಾಕಿದರು ಆ ಕಾಸಿಮಾಕ.. . . . .
  ನಾನು ಆ ಅಹಂಭಾವಿ ಕಾಸಿಮಾಕನವರನ್ನು , ನಾನು ಕಷ್ಟಪಟ್ಟು ಬೇಡಿ ಕೊಟ್ಟ ಹಣವನ್ನೂ ತದೇಕ ಚಿತ್ತದಿಂದ ದಿಟ್ಟಿಸುತ್ತಿದ್ದೆ.ಆ ಹಣಕ್ಕಾಗಿ ಅದೆಷ್ಟು ಪರದಾಡಿದ್ದೆ ನಾನು, ಅದೆಷ್ಟು ಜನರ ಬಾಯಿಂದ ಕುಹಕ ಮಾತನ್ನು ಕೇಳಿದ್ದೆ, ಅದಕ್ಕಾಗಿ ನಾನೆಷ್ಟು ಕಷ್ಟ ಪಟ್ಟಿದ್ದೆ , ನನ್ನ ಬೆವರಿನ ಹನಿ ಮಾತ್ರವಲ್ಲ ರಕ್ತವನ್ನೂ ಮಿಶ್ರಿತಗೊಳಿಸಿ ಅದನ್ನು ಕೊಟ್ಟಿದ್ದೆ ನಾನು , ಆದರೆ ಆ ಹಣ ಜುಜುಬಿ , ನನ್ನನ್ನು ಮೂರ್ಖಶಿಖಾಮಣಿ ಎಂದು ಕರೆದ ಆ ಕಾಸಿಮಾಕನ ಶರ್ಟ್ ಪಟ್ಟಿ ಹಿಡಿದು ನಾಲ್ಕು ಬಿಗಿಯುವಷ್ಟು ಕೋಪ ಬಂದಿತ್ತು ನನಗೆ..
  ಮೂರ್ಖ ನಾನಲ್ಲ ಕಣೋ. ಹೆಣ್ಣಿನ ಕಡೆಯವರಿಂದ ರಕ್ತ ಮಾತ್ರವಲ್ಲ ಪ್ರಾಣವನ್ನೂ ಹಿಂಡುವ ನಿಮ್ಮಂತನರು ಕಣೋ ಶತ ಮೂರ್ಖರು ಎಂದು ಹೇಳುವ ಮನಸ್ಸಾಯಿತು ನನಗೆ.. ಆದರೆ ನನ್ನ ಮನದ ಮಸ್ತಿಸ್ಕದಲ್ಲಿ ಮಗಳ ನಿಸ್ಸಹಾಯಕತೆಯ ಮುಖ ತೇಲಿ ಬಂದು ನನ್ನ ಕೋಪವೆಲ್ಲಾ ಒಮ್ಮೆಲೇ ತಣ್ಣಗಾಯಿತು. ನಾನು ಮೆಲ್ಲನೆ ಏಳುತ್ತಾ ಕಾಸಿಮಾಕನ ಕೈಯನ್ನು ಭದ್ರವಾಗಿಡಿದಿದ್ದೆ,ಕಾಸಿಮಾಕ ನನ್ನಿಂದ ಬಹಳ ದೊಡ್ಡ ತಪ್ಪಾಗೋಯ್ತು, ನನ್ನನ್ನು ಕ್ಷಮಿಸಿ ಮಗಳ ಬಾಳು ಬೆಳಗಳು ಸಹಾಯಕರಾಗಿ ಕಾಸಿಮಾಕ. ಎಂದು ಅವರಲ್ಲಿ ಅಂಗಲಾಚಿ ಬೇಡುತ್ತಿದ್ದೆ ನಾನು.
  ಇಲ್ಲ ಆ ಕಾಸಿಮಾಕ ಮನುಷ್ಯರಲ್ಲ ಮಾನವ ರೂಪದ ಕಲ್ಲು ಬಂಡೆ ಅವರು. ಅಲ್ಲಾಹು ಅವರನ್ನು ಸೃಷ್ಟಿಸುವಾಗ ಹೃದಯ ಹೀನರಾಗಿ ಸೃಷ್ಟಿಸಿದ್ದಾನೋ ಏನೋ..? ನಾನು ಮಾತ್ರವಲ್ಲ ಮದುವೆಯ ಸಂಭ್ರಮದಲ್ಲಿ ಪಾಳ್ಗೊಳ್ಳಲು ಬಂದ ಜನರು ಕೂಡಾ ಅವರಲ್ಲಿ ಎಷ್ಟೊಂದು ಪರಿ ಪರಿಯಾಗಿ ಬೇಡುತ್ತಿದ್ದರು. ಇಲ್ಲ ಆ ಕಾಸಿಮಾಕ ಕರಗಲಿಲ್ಲ . ಅವರು ಕರಗುವವರೂ ಅಲ್ಲ . ಬಂಡೆ ಕಲ್ಲು ಎಂದಾದರು ಹೂ ಬಿಡುವುದುಂಟಾ?
  ನೀನಲ್ಲದಿದ್ದರೆ ಇನ್ನೊಂದು ಸಂಬಂಧ ಹಿಡಿಯಬಹುದು ಕಣೋ ನಮಗೇನು ಸಂಬಂಧಕ್ಕೆ ಬರ ಬಂದಿದೆಯಾ? ಎಂದೆನ್ನುತ್ತಾ ತನ್ನ ಪರಿವಾರದೊಡನೆ ಹೊರಟು ಹೋದ ಆ ಕಾಸಿಮಾಕನವರನ್ನು ಕಣ್ಣೀರಿನ ಕಂಬನಿಯೊಂದಿಗೆ ಅವರು ಹೋದ ದಿಕ್ಕನ್ನೇ ದಿಟ್ಟಿಸುತ್ತಿದ್ದೆ . ಅವರು ಹೋಗುತ್ತಿದ್ದ ದೃಶ್ಯ ನನ್ನ ಕಣ್ಣೀರಿನೊಂದಿಗೆ ಮುಸುಕು ಮುಸುಕಾಗಿ ಕಾಣುತಿತ್ತು.
  ನನ್ನ ಮೈ ರೋಮಗಳೆಲ್ಲ ಎದ್ದು ನಿಂತಿತ್ತು . ಹೃದಯ ಹೊಟ್ಟೆಗೆ ಬಂದಂತಾಗಿತ್ತು. ಕೊಡಲಿಯಿಂದ ಮನಸ್ಸಿಗೆ ಹೊಡೆದ ಹಾಗೆ ಹತಾಶನಾದೆ. ಛೆ.. ನಾನು ಈ ದಿನಕ್ಕಾಗಿ ಎಷ್ಟೊಂದು ಕಾತರದಿಂದ ಕಾಯುತ್ತಿದ್ದೆ.ಮಗಳ ಬಾಳು ಒಂದು ದಡ ಸೇರಿಸಿದ ಸಂತೃಪ್ತಿ ಅದಾಗಲೇ ನನ್ನ ಮನದಲ್ಲಿ ತುಂಬಿ ತುಳುಕಾಡುತಿತ್ತು. ಆದರೆ ಏನಾಗಿ ಹೋಯಿತು ನನ್ನ ಮಗಳ ಬಾಳು? ಇನ್ನು ಅವಳಿಗೆ ಭವಿಷ್ಯವಿದೆಯೆ..? ಕಷ್ಟ ಕಾಲದಲ್ಲಿ ನೆರವಾಗದ ಹಾಳು ಮನುಷ್ಯ ರೂಪಿಗಳ ಬಾಯಿಗಳು ಇನ್ನು ನನ್ನ ಮಗಳನ್ನು ನೇರವಾಗಿ ತಲೆಯೆತ್ತುವಂತೆ ಮಾಡುವಾವೆ..? ಒಟ್ಟಾರೆ ಪ್ರಶ್ನೆಗಳೆಲ್ಲಾ ಕೀಟದಂತೆ ನನ್ನ ಮನವನ್ನು ಕೊರೆಯುತ್ತಿದ್ದವು.
  ನಾನು ಆ ಜನಗಳ ನಡುವೆ ತಲೆಯೆತ್ತಲು ತಾಕತ್ತಿಲ್ಲದವನಂತೆ ತಲೆ ಕೆಳಗೆ ಹಾಕಿ ನನ್ನ ಮಗಳಿಗಾಗಿ ಅರಸುತಿದ್ದೆ. ಸರ್ವಾಲಂಕಾರ ಭೂಷಿತಳಾಗಿ ಮನದೊಳಗೆ ಸಾವಿರ ಶುಭ ನಿರೀಕ್ಷೆಗಳಿಗೆ ನಾಂದಿ ಇಟ್ಟು ಕುಳಿತಿದ್ದ ನನ್ನ ಮಗಳು ಆದಷ್ಟೂ ತನ್ನ ದುಃಖವನ್ನು ಅದುಮಿಡಲು ಶತ ಪ್ರಯತ್ನ ಪಡುತ್ತಿದ್ದಳು.ಜನಗಳೆಲ್ಲ ಮೆಲ್ಲ ಮೆಲ್ಲನೆ ಚದುರುತ್ತಿದ್ದರು. ನಾನು ಮಗಳ ತಲೆ ನೇವರಿಸುತ್ತಾ .. ಸಹಾನುಭೂತಿಯಿಂದ .. ಅಳಬೇಡ ಫ಼ಾತಿಮ... ಅವನಲ್ಲದಿದ್ದರೆ ಇನ್ನೊಬ್ಬ . ದೇವ ಹೆಣ್ಣಿಗೊಂದು ಗಂಡನ್ನು ಸೃಷ್ಟಿ ಮಾಡಿಯೇ ಇರುತ್ತಾನಲ್ಲ.. ಸಹನೆ ತಂದು ಕೊಳ್ಳು ಮಗಳೇ .. ಸಹನೆಗೆ ತಕ್ಕ ಪ್ರತಿಫಲ ಅಲ್ಲಾಹು ಕೊಡುತ್ತಾನೆ . ಎಂದವಳನ್ನು ಸಮಾಧಾನ ಪಡಿಸುತ್ತಿದ್ದೆ.
  ಅವಳು ದುಃಖದಿಂದ ಇಲ್ಲ ಬಾಪಾ .. ಹೆಣ್ಣಿನ ಬಾಳು ಗಾಜಿನಷ್ಟೇ ಸೂಕ್ಷ್ಮವಾದುದು ಅದು ಒಂದು ಸಲ ಒಡೆದು ಹೋದರೆ , ಮತ್ತೆ ಅದನ್ನು ಮೊದಲಿನ ಆಕಾರಕ್ಕೆ ತರೋಕ್ಕಾಗುವುದಿಲ್ಲ. ನಮ್ಮ ಸಮಾಜ ಎಷ್ಟೇ ಮುಂದುವರಿದರೂ ಹೆಣ್ಣಿಗೆ ಮಾತ್ರ ಬಾಳೋಕೆ ಇನ್ನೊಂದು ಅವಕಾಶ ಕೊಡೋದಿಲ್ಲ. ಅದೇ ಗಂಡಾದ್ರೆ ಎಷ್ಟು ಬೇಕಾದ್ರೂ ಮದುವೆಯಾಗಬಹುದು ಆದರೆ ಹೆಣ್ಣಿಗೆ ಮಾತ್ರ ಒಂದೇ ಮದುವೆ ಅಲ್ವಾ ?॒ ಎಂದೇಳುತ್ತ ಬಿಕ್ಕಳಿಸಿತ್ತಿದ್ದಳು ಅವಳು.. ಅವಳ ಮನದಲ್ಲಿ ಭಯಂಕರವಾದ ಸಾಗರದ ಅಲೆಗಳು ಭೋರ್ಗರೆಯುತ್ತಿದ್ದವು ಎಂಬುವುದಕ್ಕೆ ಅವಳ ಕಣ್ಣೀರೇ ಸಾಕ್ಷಿಯಾಗಿದ್ದವು.ಅವಳು ಹೇಳೀದ ಮಾತುಗಳು ಸಾವಿರ ಮುಳ್ಳುಗಳಾಗಿ ಎದ್ದು ಬಂದು ನನ್ನೆದೆಯನ್ನು ಭರ್ಜಿಯಂತೆ ಚುಚ್ಚ ತೊಡಗಿತ್ತು.ನಾನು ಅವಳನ್ನು ಸಮಾಧಾನಿಸಲು ತಾಕತ್ತಿಲ್ಲದವನಂತೆ ಕುಸಿದು ಕುಳಿತೆ.
  ಸ್ನೇಹಿತ್ ಖಾದರ್ ಭುಜದ ಮೇಲೆ ಕೈಟ್ಟು ನನ್ನನ್ನು ಸ್ವಾಂತಾನಿಸುತ್ತಿದ್ದ ಯಾಕೋ ಮಗಳ ಅಳು ಕಡಿಮೆಯಾಗುವುದು ಕಾಣಿಸದಾದಾಗ ಹಣೆಯಲ್ಲಿ ಬೆವರು ಮತ್ತಿನಂತೆ ಮಡುಗಟ್ಟ ತೊಡಗಿತ್ತು. ಅವಳು ತನ್ನೆದೆಯನ್ನು ಒತ್ತಿ ಹಿಡಿದು ನರಳುತ್ತಿರುವ ಪರಿಯನ್ನು ನೋಡಲಾಗದೆ ನನಗೆ ಕಣ್ಣು ಕತ್ತಲಿಟ್ಟಂತಾಯಿತು,ನಾನು ಖಾದರ್ ಕೈಯನ್ನು ಭದ್ರ ವಾಗಿಡಿದು ನನ್ನ ಮಗಳನ್ನು ಈ ವರ್ತುಲದಿಂದ ಹೇಗಾದರೂ ಪಾರು ಮಾಡಿ ನನ್ನ ಫಾತಿಮಾಳನ್ನು ನನಗಾಗಿ ಉಳಿಸಿಕೊಡು ಖಾದರ್.. ಎಂದವನಲ್ಲಿ ಮೊರೆಯಿಡುತ್ತಿದ್ದೆ ನಾನು..
  ಛೆ.. ಏನಿದು ಹಸನ್ .. ಅವಳಿಗೆ ದುಃಖದ ಭಾರ ತಡೆಯಲಾಗದೆ ಸಣ್ಣ ಅಟ್ಯಾಕ್ ಆಗಿದೆಯಷ್ಟೇ.. ಅವಳ ದಃಖದ ವೇಗವನ್ನು ತಗ್ಗಿಸಲು ಆದಷ್ಟೂ ಪ್ರಯತ್ನ ಪಡು ಅದು ಬಿಟ್ಟು ಇದೇನು ನೀನು ಎಳೇ ಮಗುವಿನ ಹಾಗೆ ಅಳುತ್ತಿರುವುದು..? ಎಂದೇಳುತ್ತಾ ಸಮಾಧಾನಿಸುತ್ತಿದ್ದ ಆತ...ನಾನು ಅವನ ಮಾತನ್ನೇ ಮೆಲುಕು ಹಾಕುತ್ತಾ.. ಮಗಳ ಮೊಗವನ್ನೇ ದೀರ್ಘವಾಗಿ ದಿಟ್ಟಿಸುತ್ತಿದ್ದೆ. ಸಾಗರದ ಅಲೆಗಳಂತೆ ನೂರಾರು ಭಾವನೆಗಳು ಒಮ್ಮೆಲೇ ನನ್ನನ್ನು ಅಪ್ಪಳಿಸಿದಾಗ ಮೆಲ್ಲನೆ ನಡುಗಿ ಹೋದೆ ನಾನು.. ಇನ್ನು ಅವಳ ದುಃಖವನ್ನು ಕಡಿಮೆ ಗೊಳಿಸಳು ನನ್ನಿಂದ ಸಾಧ್ಯವೇ..? ಎತ್ತ ಬೇಕಾದರೂ ಹೊರಳಬಹುದಾದ ಎಲುಬಿಲ್ಲದ ಹಾಳು ನಾಲಗೆ. ಅನೇಕ ಕತೆ ಕಟ್ಟಿ ಹೇಳುತ್ತಿರುವ ಈ ಹಾಳು ಮನುಷ್ಯ ಜನ ನನ್ನ ಮಗಳನ್ನು ಇನ್ನು ಸರಿಯಾಗಿ ಬದುಕಲು ಬಿಡಬಹುದೇ..? ಯಾಕೋ ದಿನ ಪತ್ರಿಕೆ ಗಳಿಗಿಂತ ಬಿರುಸಾಗಿ ಕೆಲಸ ನಿರ್ವಹಿಸುವ ಜನಗಳ ಬಾಯಿ ನನ್ನ ಮಗಳನ್ನು ಸರಿಯಾಗಿ ಬದುಕಲು ಬಿಡಲಾರರೆಂದಿನಿಸಿತು ನನಗೆ..
  ನನ್ನ ಮನದ ತುಂಬಾ ಅಲೆಗಳ ಭೋರ್ಗರೆತ ಇದು ಯಾವ ರೀತಿ ದಡ ಮುಟ್ಟುವುದೋ ಎಂ ತವಕ ಬೇರೆ. ಇಷ್ಟರವರೆಗೆ ನನ್ನ ಕಾಲು ಮಾತ್ರ ತುಂಡಾಗಿತ್ತು, ಆದರೆ ಈಗ ನನ್ನ ಹೃದಯ ಕೂಡಾ ತುಂಡಾಗಿದ್ದಂತಾಯಿತು.ಅದ್ಯಾಕೆ ಎಲ್ಲಾ ವರ್ಗಗಳಿಗಿಂತ ಶ್ರೇಷ್ಟವಾದ ಮನುಷ್ಯ ಇಷ್ಟು ನಿರ್ದಯಿಯಾದ..? ಕೇವಲ ಹಣಕ್ಕಾಗಿ ಮಾತ್ರ ಹೆಣ್ಣು ಹೆತ್ತವರ ಕಣ್ಣೀರಲ್ಲಿ ಈ ರೀತಿ ಆಟವಾಡಲು ಸಾಧ್ಯವೇ..?ಸಾಧ್ಯವಿಲ್ಲವೆಂದೆನಿಸಿತು ನನಗೆ.. ಯವ್ವನದಲ್ಲಿ ಕಂಗೊಳಿಸುವ ಈ ದೇಹ . ಜೀವನ ಮಾಗಿದಂತೆ ಚರ್ಮ ಸುಕ್ಕುಗಟ್ಟಿ ಸಂದರ್ಯ ಕಣ್ಮರೆಯಾದಾಗ. ಕೆಲಸಕ್ಕೆ ಬಾರದ ವಸ್ತುವಿನಂತೆ ಎಸೆಯಲ್ಪಡುವ ಈ ದೇಹ .. ಜಗತ್ತಿನಿಂದೀಚೆಗೆ ಬೆತ್ತಲಾಗಿಯೇ ಬಂದು ಬೆತ್ತಲಾಗಿಯೇ ಕೊನೆಗೊಳ್ಳುತ್ತದೆ. ಮಧ್ಯೆ ಮಾತ್ರ ನೂರೆಂಟು ಆಸೆ ಬಯಕೆ ವ್ಯಾಮೋಹ . ಇದೇಕೆ ಹೀಗೆ..? ಯಾಕೋ ಯೋಚಿಸುತ್ತಾ ಹೋದರೆ ಇದರ ತಲೆ ಬುಡಾನೆ ಅರ್ಥವಾಗುತ್ತಿಲ್ಲ ನನಗೆ.. ನಾನು ದುಃಖದ ಭಾರ ನೀಗಲೆಂದು ಆ ಮನೆಯಿಂದ ಹೊರ ಬಂದು ಬಿರುಸಾಗಿ ಹೆಜ್ಜೆ ಹಾಕುತ್ತಿದ್ದೆ. ಮನ ಪ್ರಶಾಂತತೆಯನ್ನು ಬಯಸಿತ್ತು. ಮತ್ತೊಂದು ಕಡೆ ಮಗಳ ಭವಿಷ್ಯವನ್ನು ನೆನೆದು ನನ್ನೆದೆ ಥರಗುಟ್ಟುತ್ತಿತ್ತು.ಯಾಕೋ ಈ ಊರು.. ಈ ಜನ.. ಈ ಲೋಕ.. ಎಲ್ಲವೂ ಕೃತಕವೆಂದೆನಿಸಿತು ನನಗೆ.
  ದೂರದಲ್ಲಿ ಬಣ್ಣ ಬಣ್ಣದ ಕಾಗದ ಜಗ ಜಗಿಸುವಲೈಟುಗಳು ಕಿವಿಗಡಚ್ಚುವ ಮೈಕ್ ಸಂಡ್ ಗಳೊಡನೆ ವರಧಕ್ಷಿಣೆ ವಿರುದ್ಧ ಭಾಷಣ ಗಳೊಡನೆ ಕೆಂಡ ಕಾರುತ್ತಿದ್ದದ್ದು ಕಾಣಿಸುತಿತ್ತು . ಮನುಷ್ಯನ ಮನಸ್ಸನ್ನು ಅರ್ಥ ಮಾಡಿಕೊಳ್ಳದ ಈ ಜನ .. ದೊಡ್ದ ದೊಡ್ಡ ಭಾಷಣಗಳನ್ನು ಮಾಡಿ ಹೆಸರಿಗಾಗಿ ಅಧಿಕಾರಕ್ಕಾಗಿ ಶಭಾಶ್ ಗಿರಿ ಗಿಟ್ಟಿಸುತ್ತಿದ್ದ ಈ ಜನ .. ಅವರನ್ನು ಅನುಸರಿಸಿ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿದ್ದ ಆ ಉಳಿದ ಜನ ..ಥೂ.. ಧಿಕ್ಕಾರವಿರಲಿ ಇಂತಹಾ ಜನರಿಗೆ.. ಎಂದು ಉಗಿಯ ಬೇಕೆನ್ನಿಸಿತು ನನಗೆ..ಅಲ್ಲಿ ನೆರೆದಿದ್ದ ಜನರನ್ನು ಕಂಡು ನನ್ನೆದೆಯ ಜ್ವಾಲಾಗ್ನಿ ಒಮ್ಮೆಲೇ ಹತ್ತಿ ಉರಿಯ ತೊಡಗಿತ್ತು.ನಾನು ಅವರ ಬಳಿಗೆ ಸರಿಯುತ್ತಾ ಎರಡು ಮುಷ್ಟಿ ತುಂಬಾ ಕಲ್ಲುಗಳನ್ನು ಬಾಗಿ ತೆಗೆದು ತೆಗೆದು ಅವರೆಡೆಗೆ ಎಸೆಯುತಿದ್ದೆ. ಅಷ್ಟರವರೆಗೆ ಭಾಷಣ ಕೇಳುವುದರಲ್ಲಿ ತಲ್ಲೀನರಾಗಿದ್ದ ಜನಗಳು ಈಗ ನನ್ನೆಡೆಗೆ ತಿರುಗಿದರು.
  ಏಯ್.. ಯಾರೋ ಅದು.. ಏಯ್ ಆ ಹುಚ್ಚನನ್ನು ಹಿಡಿಯಿರೋ ತದುಕಿರೋ ಅವನಿಗೆರಡು ಎಂದು ಹೇಳುತ್ತಾ ದೊಣ್ಣೆ ಬಡಿಗೆ ಗಳೊಡನೆ ಓಡಿ ಬರುತ್ತಾ ನನ್ನನ್ನು ಹಿಗ್ಗಾ ಮುಗ್ಗಾ ಥಳಿಸುತ್ತಿದ್ದರು. ನನಗೆ ಅವರ ಸಮಕ್ಕೆ ಹೋರಾಡಲು ಸಾಧ್ಯ ವಿಲ್ಲವೆಂದೆನಿಸಿ ನಾನು ಅವರೆತ್ತರಕ್ಕೆ ನನ್ನ ಸ್ವರ ಏರಿಸುತ್ತಿದ್ದೆ.ಹೌದು ಕಣ್ರೋ ನನಗೆ ಹುಚ್ಚು.. ಹುಚ್ಚು ಹಿಡಿದಿದೆ ನನಗೆ.. ನನ್ನನ್ನು ಹುಚ್ಚನನ್ನಾಗಿ ಪರಿವರ್ತಿಸಿದ ನೀವೂ ಹುಚ್ಚರು... . .ಜನಗಳೆಲ್ಲಾ ನನ್ನನ್ನು ಸುತ್ತು ಗಟ್ಟಿ ನಿಂತಿದ್ದರು . ನಾನು ಮಂಡಿಯೊಳಗೆ ಮುಖ ಹುದುಗಿಸಿ ತಲೆ ಕೆಳಗೆ ಹಾಕಿ ನೆಲವನ್ನು ದಿಟ್ಟಿಸುತ್ತಿದ್ದೆ. ಮತ್ತೊಮ್ಮೆ ನನ್ನನ್ನು ಸುತ್ತು ಗಟ್ಟಿ ನಿಂತಿದ್ದ ಜನರ ಕಡೆಗೆ ದೃಷ್ಟಿ ಹಾಯಿಸಿದೆ.ಆ ಹೃದಯವಿಲ್ಲದ ಜನರನ್ನು ನೋಡಿ ಯಾಕೋ ನನಗೆ ಜೋರಾಗಿ ನಗಬೇಕೆನ್ನಿಸಿತು. ನಾನು ನನಗೆ ಸಾಧ್ಯವಾದಷ್ಟು ಜೋರಾಗಿ ನಗುತ್ತಿದ್ದೆ.ಮತ್ತೊಂದು ಕಡೆ ನನ್ನ ಮಗಳ ಭವಿಷ್ಯ ಅಂತರಾಳದಲ್ಲಿ ಚುಚ್ಚುತಿತ್ತು. ಮಗಳ ಭವಿಷ್ಯವನ್ನು ನೆನೆದು ನನಗೆ ಜೋರು ದುಃಖ ವುಮ್ಮಳಿಸಿ ಬರುತಿತ್ತು.ನಾನು ನನ್ಗೆ ಸಾಧ್ಯವಾದಷ್ಟು ಜೋರು ಧ್ವನಿಯಲ್ಲಿ ಅಳುತ್ತಿದ್ದೆ.
  ಈಗ ನನ್ನನ್ನು ಸುತ್ತು ಗಟ್ಟಿದ್ದ ಜನ ತ್ಚು.. ತ್ಚು..ತ್ಚು.. ಪಾಪ.. ನಿಜವಾಗಿಯೂ ಇವನಿಗೆ ಹುಚ್ಚು ಹಿಡಿದಿದೆ ಕಣ್ರೋ ಎಂದು ಹೇಳುತ್ತಾ ನನ್ನಿಂದ ಸರಿದು ಹೋಗುತಿದ್ದರು. ನಾನು ಮಾತ್ರ ಆ ನಿರ್ಜನ ಜಾಗದಲ್ಲಿ ಶೂನ್ಯಕ್ಕೆ ದೃಷ್ಟಿ ನೆಟ್ಟು ಕುಳಿತಿದ್ದೆ. ನನ್ನ ಮಗಳ ಕರಾಳ ಬದುಕಿನೊಂದಿಗೆ ನನ್ನನ್ನೂ ವಿಲೀನಗೊಳಿಸುತ್ತಾ... . . . . . . ;
  posted by ASHRAF @ 5:22 AM   1 comments
  ಬದುಕಿನ ತಿರುವುಗಳು ಬಹಳಷ್ಟು ವಿಸ್ಮಯ
  ಬದುಕು ಅದೆಂತೆಂತಹ ಪಾಠಗಳನ್ನು ಕಲಿಸಿ ಕೊಟ್ಟಿಲ್ಲ,ಈ ಬದುಕು ಸಾಕೆನಿಸುವಷ್ಟು ,ಇನ್ನು ಈ ಭೂಮಿಯಲ್ಲಿ ಬದುಕಲಾರೆನಿಸುವಷ್ಟು, ಬದುಕಿನ ಪ್ರತೀಯೊಂದು ಮಜಲುಗಳು, ಪ್ರತೀಯೊಂದು ತಿರುವುಗಳು, ಬಹಳಷ್ಟು ವಿಸ್ಮಯಕಾರಿ ನಂಬಿಕೆಯೇ ಬರದಷ್ಟು ಪಾಠವನ್ನು ಕಲಿಸಿ ಕೊಟ್ಟಿದೆ.

  ಹಸಿವೆಂದರೇನೆಂದು ಗೊತ್ತಿಲ್ಲದಿದ್ದಾಗ, ಹಸಿವಿನ ರುಚಿಯನ್ನು, ಕುಟುಂಬವಿಲ್ಲದೆ ಏಕಾಂಗಿಯಾಗಿ ಜೀವಿಸುವುದು ಅಸಾಧ್ಯವೆಂದೆನಿಸಿದಾಗ ಕಬ್‌ರಿನ ಒಂಟಿತನವನ್ನು, ಮನೆ ಮಠವೇನೂ ಇಲ್ಲದೆ, ಗೊತ್ತು ಗುರಿಯಿಲ್ಲದೆ ಪಯಣಿಸಿದಾಗ ಮರಣದ ನೆನಪನ್ನು, ಒಲೆಯುರಿಸಲು ಏನೇನು ಇಲ್ಲದೆ ಹೋಟೆಲೂಟಕ್ಕೆ ಶರಣು ಹೊಡೆದು, ಹೋಟೆಲೂಟ ಅತ್ತ ಉಗುಳಲೂ ಆಗದೆ, ನುಂಗಲೂ ಆಗದೆ, ಕಣ್ಣಲ್ಲಿ ಕಂಬನಿ ಉಕ್ಕಿ ಹರಿದಾಗ, ಹೊಟ್ಟೆಗೆ ಹಿಟ್ಟಿಲ್ಲದೆ ಹಪ ಹಪಿಸುತ್ತಿರುವವರ ಪಾಡನ್ನು, ಹುಟ್ಟಿಧಾರಭ್ಯ ಅನುಕ್ರಮವಾಗಿ ಪಾಲಿಸುತ್ತಿದ್ದ ಜೀವನ ಕ್ರಮ ಒಮ್ಮೆಲೇ ತಿರುಗು ಮುರುಗಾಗಿ, ಮಾನಸಿಕವು ಶಾರೀರಿಕವು, ಬೆಂದು ಬಸವಳಿಯ ತೊಡಗಿದಾಗ, ನಮಗಿಂತಲೂ ವ್ಯಥೆಯಿಂದ ಬಳಳುತ್ತಿರುವವರನ್ನು, ಹೀಗೆ ಬದುಕು ಬಹಳಷ್ಟು ರೋಚಕ ಘಟನೆಯನ್ನು ಕಾಣಿಸಿ ಕೊಟ್ಟಿದೆ.

  ನಾವು ಬದುಕಿನ ಪ್ರತೀಯೊಂದು ಘಟ್ಟದಲ್ಲೂ ಒಂದು ಒಳ್ಳೆಯ ಪಾಠವನ್ನು ಕಲಿಯುತ್ತೇವೆ. ಆದರೆ ವಿಪರ್ಯಾಸವೆಂದರೆ, ಬದುಕಿನ ಪ್ರತೀ ಮಜಲುಗಳಲ್ಲಿಯೂ ಕಲಿತ ಪಾಠ ಬಹಳಷ್ಟು ಬೇಗನೆ ಮರೆತು ಬಿಡುತ್ತೇವೆ. ಈ ಬದುಕೇ ಹೀಗೆ ನಮಗೆ ಇನ್ನು ಸಹಿಸಲು ಸಾಧ್ಯವೇ ಇಲ್ಲ ವೆಂಬಷ್ಟು ಕಷ್ಟಗಳು ಬರುತ್ತವೆ. ಇನ್ನು ಯಾವ ದಾರಿಯೂ ಇಲ್ಲ, ಎತ್ತ ನೋಡಿದರೂ ಬರೀ ಕತ್ತಲು ವೆಂಬನಿಸುವಷ್ಟು,ಆದರೆ ಇದೆಲ್ಲ ಇಹ ಜೀವನದಲ್ಲಿ ಕೇವಲ ಪರೀಕ್ಷೆ ಮಾತ್ರ, ಪರಲೋಕದ ಜೀವನದಲ್ಲಿನ ನಮ್ಮ ಅಂಕ ಪಟ್ಟಿಯಲ್ಲಿ ಬಹಳಷ್ಟು ಅಂಕವನ್ನು ಪಡೆಯಲು ನಮಗಿರುವ ಅದೃಷ್ಟ ಎಂದು ಕೊಂಡರೆ ಸಾಕು.

  ಅಲ್ಲಾಹ್ ಕೆಲವರಿಗೆ ಎಲ್ಲವನ್ನೂ ಕೊಟ್ಟು ಪರೀಕ್ಷಿಸುತ್ತಾನೆ. ಮತ್ತೆ ಕೆಲವರಿಗೆ ಏನನ್ನೂ ಕೊಡದೆಯೂ ಪರೀಕ್ಷಿಸುತ್ತಾನೆ. ಕೆಲವರಿಗೆ ಬೇಕಾದಷ್ಟು ಸಂಪತ್ತನ್ನು ಕೊಟ್ಟು, ಇನ್ನಲವರಿಗೆ ಮೇಲಿಂದಮೇಲೆ ಸೋಲಿನ ರುಚಿಯನ್ನು ತೋರಿಸಿ, ಮತ್ತಲವರಿಗೆ ಸಹಿಸಲಾರದಷ್ಟು ವ್ಯಥೆಯನ್ನು ಕೊಟ್ಟು, ಹೀಗೆಯೇ ಆತನ ಪರೀಕ್ಷೆ . ತನ್ನ ದಾಸರ ವಿಶ್ವಾಸವನ್ನು ಪರೀಕ್ಷಿಸಲು, ಮುಂದುವರಿಯುತ್ತದೆ . . . ;ಇದರಲ್ಲಿ ಯಾರು ಯಶಸ್ವಿಯಾಗುತ್ತಾರೋ ಅವರು ಇಹದಲ್ಲೂ ಪರದಲ್ಲೂ ಯಶಸ್ವಿಯಾಗುತ್ತರೆ. ಇದರಲ್ಲಿ ಯಾರು ಸೋಲುತ್ತಾರೋ ಅವರು ಎರಡು ಕಡೆಯೂ ಸೋಲಿನ ರುಚಿ ಅನುಭವಿಸಬೇಕಾಗುತ್ತದೆ.

  ಬದುಕು ಒಂದು ಅದೃಷ್ಟ ವೆಂದು ಕೊಂಡವರಿದ್ದಾರೆ, ಬದುಕು ದುರಾದೃಷ್ಟ ವೆಂದು ಕೊಂಡವರೂ ಇದ್ದಾರೆ. ಕೆಲವರು ಉನ್ನಲಾಗದೆ ರೆ. ಮತ್ತೆ ಕೆಲವರು ಬದುಕಲಾಗದೆ ಉನ್ನುತ್ತಿದ್ದಾರೆ. ಕೆಲವರು ಹಸಿವಿಲ್ಲದೆ ಒದ್ದಾಡುತ್ತಿದ್ದರೆ ಮತ್ತೆ ಕೆಲವರು ಹಸಿವಿನಿಂದ ಒದ್ದಾಡುತ್ತಿದ್ದರೆ, ಬದುಕೆಂದರೆ ಇದೇ..

  ಈ ಬದುಕೇ ಹೀಗೆ , ನಮಗೆ ಬೇಕೆಂದೆನಿಸಿದಾಗ ಬರುವುದಿಲ್ಲ, ಬೇಡವೆನಿಸಿದಾಗ ಹೊಗುವುದೂ ಇಲ್ಲ, ನಾವೇ ಬದುಕಿನ ರಥಗಳನ್ನು ಸಹನೆ ಹಾಗೂ ಸ್ಥೈರ್ಯದಿಂದ ಎಳೆದು ಕೊಂಡು ಹೋಗಲು ಪ್ರಯತ್ನಿಸಬೇಕು. ಕಷ್ಟ, ನಷ್ಟ, ಸೋಲು, ಗೆಲುವು ಗಳೇನೆ ಇದ್ದರೂ ಎಲ್ಲವನ್ನೂ ಸಮ ಚಿತ್ತದಿಂದ ಎದುರಿಸುವ ಮನೋಭಾವ ನಮ್ಮಲ್ಲಿರಬೇಕು.

  ಅದಲ್ಲದೆ ನಾವು ಬದುಕನ್ನು ಬಹಳಷ್ಟು ಸಿಂಪಲ್ಲಾಗಿ ತೆಗೆದು ಕೊಳ್ಳಬೇಕು. ಇಹ ಜೀವನದ ಯಾವುದೇ ಆಸೆ ಆಕಾಂಕ್ಷೆ ಗಳಿಗೆ ಒತ್ತು ಕೊಡದೆ, ಪರಲೋಕದ ಜೀವನಕ್ಕಾಗಿ ನಮ್ಮ ಈ ಇಹ ಜೀವನವನ್ನು ಮುಡಿಪಾಡಿಗಿಡಬೇಕು, ಆಗ ಮಾತ್ರ ಸುಂಧರ ಸುಮಧುರ ಬದುಕು ನಮಗೆ ದಕ್ಕೀತು. ಇಲ್ಲದಿದ್ದ್ರೆ ಈ ಸ್ವಾರ್ಥಮಯ ಯುಗದಲ್ಲಿ ಬದುಕಲು ಖಂಡಿತಾ ಸಾಧ್ಯವಿಲ್ಲ.

  ಈ ಬದುಕು ಎಷ್ಟು ಸತ್ಯವೋ ಮರಣ ಕೂಡ ಅಷ್ಟೇ ಸತ್ಯ, ಖಬ್‌ರಿನ ನೆನಪು, ಮರಣದ ನೆನಪು,ಮಹ್‌ಶರದ ನೆನಪು. ನಮ್ಮ ಮನದಲ್ಲಿ ಯಾವಾಗಲೂ ಇರಲೇ ಬೇಕಾದ ಸಂಗತಿಗಳಿವು. ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಜೀವನ ನಡೆಸಲು ಪ್ರಯತ್ನಿಸಬೇಕು. ಬದುಕಿನಲ್ಲಿ ಯಾವಾಗಲೂ ಕತ್ತಲಿರಲು ಸಾಧ್ಯವಿಲ್ಲ. ಒಂದಿಲ್ಲೊಂದು ದಿನ ಬೆಳಕು ಬರಲೂ ಬಹುದು. ಇಲ್ಲದಿದ್ದರೆ ಈ ಜೀವನದ ಕತ್ತಲು, ಆ ಪಾರತ್ರಿಕ ಲೋಕದ ಬೆಳಕಿಗೆ ನಾಂದಿ ಯಾಗಲಿರುವ ದಾರಿ ಎಂದೆನಿಸಿ ಕೊಳ್ಳಬೇಕು.

  ನಾವು ಯಾರಿಗಾಗಿ ಬದುಕಬೇಕು? ಯಾತಕ್ಕಾಗಿ ಬದುಕಬೇಕು. ಎಂಬುವುದು ಪ್ರತೀ ಕ್ಷಣವು ಚಿಂತಿಸಲೇ ಬೇಕಾದ ವಿಷಯ, ನಾವು ಯಾರಿಗಾಗಿಯೂ ಬದುಕಬೇಕಿಲ್ಲ. ನಮ್ಮನ್ನು ದೇವ ಸುಮ್ಮನೆ ಸೃಷ್ಟಿಸಿಲ್ಲ. ಸೃಷ್ಟಿಯ ಯೋಜನೆ ಮಾಡುವವನೂ ಅದನ್ನು ಜಾರಿಗೊಳಿಸುವವನೂ, ಅದರಂತೆ ರೂಪ ಕೊಡುವವನೂ , ಅಲ್ಲಾಹನೇ.., ಅವನಿಗೆ ಅತ್ಯುತ್ತಮ ನಾಮಗಳಿವೆ. ಭೂಮಿ ಆಕಾಶಗಳಲ್ಲಿರುವ ಪ್ರತೀಯೊಂದು ವಸ್ತುವೂ ಅವನನ್ನು ಜಪಿಸುತ್ತಿದೆ. ಮತ್ತು ಅವನು ಪ್ರಬಲನೂ ಯುಕ್ತಿ ಪೂರ್ಣನೂ ಆಗಿರುತ್ತಾನೆ. {ಅಲ್ ಹಶ್ರ್-೨೪} ನಮ್ಮ ಜನನ ಮರಣ ಹಾಗೂ ಅದರೊಳಗಿನ ಜೀವನ ಎಲ್ಲ ಎಲ್ಲವೂ ಅಲ್ಲಾಹನಿಗೇ ಸಮರ್ಪಿತವಾಗಬೇಕು.

  ಅದಲ್ಲದೆ ಹghi ತ್ ಆಯಿಶಾ, ಫ಼ಾತಿಮಾ, ಆಸಿಯಾ, ಸುಮಯ್ಯ,[ರ.ಅ] ಮುಂತಾದವರುಗಳ ಆಶಯ, ಬದುಕಿನ
  ಪ್ರತೀ ಘಟ್ಟದಲ್ಲೂ ಅವರು ತೋರಿದ ಸಹನೆ , ಅವರ ತ್ಯಾಗ್ಯೋಜ್ವಲ ಜೀವನ ಚರಿತ್ರೆ ನಮಗೆ ಮಾದರಿಯಾಗ ಬೇಕು. ಆಗ ಮಾತ್ರ ಸುಖ ಸಮೃದ್ಧದ ನೆಮ್ಮದಿಯುತವಾದ ಬದುಕು ನಮ್ಮದಾಗಲು ಸಾಧ್ಯ. ಅಂತಹಾ ಬದುಕು ನಮ್ಮದಾಗಲು ನಾವು ಪ್ರಯತ್ನಿಸೋಣ. ಅದಕ್ಕಾಗಿ ಅಲ್ಲಾಹನಲ್ಲಿ ಪ್ರಾರ್ಥಿಸೋಣ.
  posted by ASHRAF @ 5:09 AM   1 comments
  ನನ್ನಯ ಕೊರಗು....
  Sunday, June 7, 2009
  ಬದುಕಿನ ಪಯಣದಲಿ
  ನಲಿವಿಗಿಂತ ನೋವೇ ಅಧಿಕವಾಗಿದ್ದರೂ
  ಸುಖಕ್ಕಿಂತ ಹೆಚ್ಚಾಗಿ ದುಖ್ಖವೇ ಇದ್ದರೂ
  ನಗುವಿಗಿಂತ ಅಧಿಕ ಅಳುವೇ ರಾಜ್ಯವಾಳಿದರೂ
  ನನ್ನೆದೆಯಲ್ಲಿ ಹೊರ ಚಿಮ್ಮುವ ಅಗಾಧ
  ಬಯಕೆಗಳಿಗೆ ಮಾತ್ರ ಇನ್ನೂ ಬಂಜೆತನ ಬಂದಿಲ್ಲ.

  ಬದುಕಿನ ಪ್ರತೀ ಹೆಜ್ಜೆಯಲ್ಲಿಯೂ
  ಅನುಭವಿಸಿದ ಒಂಟಿತನ
  ಇಡೀ ಜಗತ್ತಿಗೇ ಹಂಚಿ ಉಳಿಯುವಷ್ಟಿದ್ದರೂ
  ಕಣ್ಣೊಳಗೆ ರಕ್ತ ಬರಿಸುವ ಅವ್ಯಕ್ತ
  ನೋವುಗಳು ನನ್ನಲ್ಲಿದ್ದರೂ
  ಪ್ರತೀ ಕ್ಷಣವೂ ಚಿಗುರೊಡೆಯುವ
  ಕನಸುಗಳು ಮಾತ್ರ ಇನ್ನೂ ಭಗ್ನ ಗೊಂಡಿಲ್ಲ

  ಬಂದು ಬಳಗ
  ಕುಟುಂಬ ಸ್ನೇಹಿತ ವರ್ಗ ವೆಲ್ಲವೂ
  ಸುಖ ಸಂತೋಷಕ್ಕೆ ಮಾತ್ರ ಸೀಮಿತವಿರಲಿ
  ಕಷ್ಟ ನಷ್ಟಗಳೇನೆ ಇದ್ದರೂ
  ನಿನಗೆ ನಿನ್ನ ಕಣ್ಣೀರು ಮಾತ್ರ ಸಂಗಾತಿಯಾಗಲಿ
  ನೋವು ನಿರಾಸೆ ದುಖ್ಖಗಳೇನೇ ಇದ್ದರೂ
  ನಿನ್ನಲ್ಲೇ ದಹಿಸಿ ದಫನ್ ಆಗಿಬಿಡಲಿ ಅದು.

  ಹೀಗೊಂದು ಸಿಧ್ದಾಂತ ದೊಡನೆ
  ಬೆನ್ನಲ್ಲಿ ಚೂರಿಯಿಕ್ಕುವ ಸಿನಿಕತನವನ್ನು
  ಈ ಸಮಾಜ ನನಗೆ ತೋರಿಸಿ ಕೊಟ್ಟರೂ,
  ಅವರಿಗಾಗಿ ಹಂಬಲಿಸುವುದನ್ನು
  ಮಾತ್ರ ಬಿಟ್ಟಿಲ್ಲ ಈ ಹ್ರದಯ.

  ಇದು ವೇದನೆಯ ಗಂಟುಗಳು ಅಲ್ಲ
  ಜೀವನದ ಕುಂಟುಗಳಿವು
  ಹಗೆ ಹೊಗೆಯಾಡುವ ಜಗದಲಿ
  ಇದೆಲ್ಲಾ ಸಹಜವೆಂದು
  ಮನ ಅಬ್ಬರದಿಂದ ಭುಸುಗುಟ್ಟುತ್ತಿದ್ದರೂ
  ಇದನ್ನೆಲ್ಲಾ ನೆನೆದು ಕೊರಗುವುದನ್ನು
  ಮಾತ್ರ ಬಿಟ್ಟಿಲ್ಲ ನಾ ಇನ್ನೂ.......
  posted by ASHRAF @ 4:28 AM   5 comments
  About Me

  Name: ASHRAF
  Home: India
  About Me: ಅಸ್ಸಲಾಮ್ ಅಲೈಕುಮ್
  See my complete profile
  Previous Post
  Archives
  ನಾ ಬರೆದದ್ದು
  Powered by

  BLOGGER

  Older Posts
  © 2005 ನೇರದಾರಿ Blogger Templates by Isnaini and Cool Cars Pictures