ನೇರದಾರಿ

ಈ ಜೀವನ ಎಂಬ ಪ್ರಯಾಣದಲ್ಲಿ ನಾವು ಸಂಧಿಸುವ ವ್ಯಕ್ತಿಗಳು ಆಕಸ್ಮಿಕ,ಅಗಲಿಕೆ ಅನಿವಾರ್ಯ, ಹಾಗೆಯೇ ಅವರವರ ನಿಲ್ದಾಣ ಬಂದ ಕೂಡಲೇ ಇಳಿಯಲೇ ಬೇಕು.ಕೆಲವರು ದೀರ್ಘ ಪ್ರಯಾಣ ಮಾಡಬಹುದು.ಇನ್ನು ಕೆಲವರು ಸಮೀಪ ಪ್ರಯಾಣದಲ್ಲಿರಬಹುದು.ನಾವೀಗ ಈ ಪ್ರಯಾಣದ ಯಾವ ಸ್ಟೇಜ್ ನಲ್ಲಿದ್ದೇವೆಂದು ಬಲ್ಲವನು ಒಬ್ಬನೇ (ಅಲ್ಲಾಹ್)ಅವನೇ ನಮ್ಮೆಲ್ಲರ ಸರ್ವ ಪಾಲಕ.ಅವನಲ್ಲದೆ ಬೇರೆ ಆರಾಧ್ಯನಿಲ್ಲ.ಅಲ್ಲಾಹ್ ನಮ್ಮೆಲ್ಲರ ಕೊನೆಯ ಪಯಣವನ್ನು ಸುಗಮ ಗೊಳಿಸಿ, ನಮ್ಮೆಲ್ಲರನ್ನು ಜನ್ನತುಲ್ ಫಿರ್ದೌಸ್ ನಲ್ಲಿ ಒಂದು ಗೂಡಿಸಲಿ

 
>
 • ಹದೀಸ್ ಗ್ರಂಥಗಳಿಂದ
  ಮುಆವಿಯಾ(ರ)ರಿಂದ ವರದಿ: ಪ್ರವಾದಿ(ಸ) ಹೇಳಿದರು: ಅಲ್ಲಾಹನು ಯಾರಿಗಾದರೂ ಒಳಿತನ್ನು ಬಯಸಿದರೆ ಅವನು ಆತನಿಗೆ ಧಾರ್ಮಿಕ ಜ್ಞಾನವನ್ನು ನೀಡುತ್ತಾನೆ. (ಬುಖಾರಿ ಮತ್ತು ಮುಸ್ಲಿಮ್)
  ಸೂರಃ ಆಲು ಇಮ್ರಾನ್ 3:110
  ನೀವು (ನಾವು ಮುಸ್ಲಿಮರು) ಮನುಷ್ಯರಿಗಾಗಿ ಹೊರತರಲ್ಪಟ್ಟ ಉತ್ತಮ ಸಮುದಾಯವಾಗಿರುವಿರಿ. ಇಸ್ಲಾಮ್ ಆದೇಶಿಸಿದ ಎಲ್ಲವನ್ನೂ ನೀವು ಮಾಡುತ್ತೀರಿ ಮತ್ತು ಇಸ್ಲಾಮ್ ವಿರೋಧಿಸಿದ ಎಲ್ಲದರಿಂದಲೂ ನೀವು ದೂರವುಳಿಯುವಿರಿ. ಮತ್ತು ನೀವು ಅಲ್ಲಾಹನಲ್ಲಿ ವಿಶ್ವಾಸವಿರಿಸುವಿರಿ. ಗ್ರಂಥ ನೀಡಲ್ಪಟ್ಟ ಜನರು (ಯಹೂದ ಮತ್ತು ಕ್ರೈಸ್ತರು) ವಿಶ್ವಾಸವಿರಿಸುತ್ತಿದ್ದರೆ, ಅದು ಅವರಿಗೆ ಒಳಿತಾಗಿರುತ್ತಿತ್ತು. ಅವರಲ್ಲಿ ಕೆಲವರಿಗೆ ವಿಶ್ವಾಸವಿದೆ. ಆದರೆ ಅವರಲ್ಲಿ ಹೆಚ್ಚಿನವರೂ ಫಾಸಿಕೂನ್ (ಅಲ್ಲಾಹನಿಗೆ ಅವಿಧೇಯರೂ, ಅಲ್ಲಾಹನ ಆಜ್ಞೆಗಳನ್ನು ಧಿಕ್ಕರಿಸುವವರೂ ಆಗಿದ್ದಾರೆ).
  ಇಣುಕಿ ಹೋದವರು

  satyasandesha
  ಈಗ ನೋಡುತ್ತಿರುವವರು
  ವೀಕ್ಷಣಾಗಾರರ ಸ್ಥಳ
  Locations of visitors to this page
  ಇಷ್ಟರವರೆಗೆ ಬರೆದದ್ದು
  ಆಕ್ಸಿಡೆಂಟ್
  Saturday, June 13, 2009
  ಟ್ರಿನ್ ಟ್ರಿನ್...... ಟ್ರಿನ್ ಟ್ರಿನ್ ........ಪೋನ್ ಜೋರಾಗಿ ರಿಂಗನಿಸುತಿತ್ತು. ಉಮ್ಮ ಅಡುಗೆ ಕೋಣೆಯಿಂದ ಧ್ವನಿ ಎತ್ತರಿಸಿ ಹೇಳುತ್ತಿದ್ದರು. "ಪೋನ್ ತೆಗೆಯೇ ಸಾಕಿರಾ... ಆವಾಗಿನಿಂದ ಫೋನ್ ರಿಂಗನಿಸುತ್ತಿದೆ ಯಾರದೋ ಏನೋ, ಏನಾದರೂ ಅರ್ಜೆಂಟ್ ವಿಷಯ ವಿದ್ದಿರಬಹುದು, ನೋಡ್ಕೋ ಹೋಗು", ಉಮ್ಮನ ಧ್ವನಿಯೂ ಪೋನಿನ ಕಿರಿಕಿರಿಯೂ ತಾಳಲಾರದೆ ನಾನು ರಿಸೀವರ್ ಎತ್ತಿದೆ. ಅತ್ತಲಿನಿಂದ ರಿಯಾಝ್ ನ ಧ್ವನಿ ಕೇಳಿಸುತಿತ್ತು. "ಹಲೋ ಸಾಕಿರ... ನಾಳೆ ಯಾಕೆ ಮೀಟಿಂಗಿಟ್ಟದ್ದು? ಹಣ ಸಿಕ್ಕುತ್ತೆ ತಾನೆ? ಇಲ್ಲದಿದ್ದರೆ ನೀನು ಅಲ್ಲಿಯೇ ನಿನ್ನುಮ್ಮನ ಮನೆಯಲ್ಲಿಯೇ ಕುಳಿತಿರಬೇಕೆಂದು ನೆನಪಿದೆಯಲ್ವಾ? ಏನು ಹೇಳುತ್ತರೆ ನಿನ್ನ ಬಾಪ ....? ಹಣ ರೆಡಿಯಾಯಿತಾ"? ರಿಯಾಝ್ ನ ಒಂದೇ ಸಮನೆ ಪ್ರಶ್ನೆಗಳನ್ನು ಕೇಳಿ ನಾನು ಕೋಪದಿಂದ ಅವಡುಗಚ್ಚಿದ್ದೆ.. "ಬಾಪಾನ ರಕ್ತ ಮಾಂಸವೆಲ್ಲಾ ನನ್ನ ಮದುವೆ ಸಮಯದಲ್ಲಿ ಬತ್ತಿ ಹೋಗಿದೆ.ಇನ್ನುಳಿದಿರುವುದು ಅವರ ದೇಹದಲ್ಲಿ ಬಳಲಿ ಬೆಂಡಾಗಿರುವ ಸಣಕಲು ಮೂಳೆ ಮಾತ್ರ , ಅದರಲ್ಲೂ ಚೆಂಡಾಡುವ ಬಯಕೆಯೇ ನಿಮಗೆ...? ಏನೇ ಮಾಡಿದರೂ ಹಣ ಮಾತ್ರ ಸಿಕ್ಕೋಲ್ಲ ಅದು ಗ್ಯಾರಂಟಿ" ಕೋಪದಿಂದ ಹೇಳಿದೆ. ಆತ ಅಷ್ಟೇ ಸಿಟ್ಟಿನಿಂದ " ಏಯ್ ಅಹಂಕಾರಿ ಹೆಣ್ಣೇ....,ಹಣ ತರದಿದ್ದರೆ ನೀನಿಲ್ಲಿಗೆ ಬರಲೇ ಬೇಡ ಅಲ್ಲೇ ಬಿದ್ಕೋ.."ಎಂದು ಪೋನ್ ಕುಕ್ಕಿದ.ಅವನು ಪೋನ್ ಇಟ್ಟ ಸದ್ದು ಕೇಳಿ ನಾನು ಮೆಲ್ಲನೆ ರಿಸೀವರನ್ನು ಯಥಾ ಸ್ಥಾನಕ್ಕೆ ಇಟ್ಟು ಹಿಂದುರುಗಿದೆ. ತಂದೆ ಪ್ರಶ್ನಾರ್ಥಕವಾಗಿ ನನ್ನನ್ನೇ ನೋಡುತ್ತಿದ್ದರು. ನನ್ನ ಮಾತನ್ನು ಕೇಳಿಸಿ ಕೊಂಡಿದ್ದರೆಂದು ಅವರ ಮುಖವನ್ನು ನೋಡಿದ ಕೂಡಲೇ ಅರಿವಾಯಿತು ನನಗೆ.ನನ್ನ ಮುಖವನ್ನೇ ದಿಟ್ಟಿಸುತ್ತಾ, ತಂದೆ.. "ನಮ್ಮ ಮರ್ಯಾದೆಯನ್ನೆಲ್ಲಾ ಹರಾಜಿಗಿಟ್ಟ ಅವ.. ಹೇಗಾದರೂ ಮಾಡಿ ಕೊಡ ಬೇಕಲ್ಲಮ್ಮಾ ಅವನಿಗೆ ಹಣ.. "ಎಂದು ದೀರ್ಘವಾಗಿ ನಿಟ್ಟುಸಿರಿಡುತ್ತಾ , ಭಾರವಾದ ಧ್ವನಿಯಲ್ಲಿ ಹೇಳುತ್ತಿದ್ದರು. ಈ ಹೇಗಾದರೂ ಎಂಬ ಪದ ಬಾಪಾ ಬ್ಯಾಂಕಿನ ಲೋನನ್ನೇ ನೆಚ್ಚಿ ನುಡಿದದ್ದುಎಂದು ನನಗೆ ಅರಿವಿತ್ತು, ಅದು ಬಿಟ್ಟು ಬೇರೆ ದಾರಿಯೂ ಅವರಿಗಿಲ್ಲ ಎಂಬುವುದೂ ಅರಿವಿತ್ತು. ತುಂಬಿದ ಕಣ್ಣುಗಳೊಡನೆ ಬಾಪಾನನ್ನೇ ದಿಟ್ಟಿಸುತ್ತಿದ್ದೆ.ಉಮ್ಮ ಸಮಾಧಾನ ಹೇಳುತ್ತಿದ್ದರು. "ನಿನ್ನ ಬದುಕು ಬೆಳಗಲು ಏನಾದರೂ ಮಾಡ್ಕೊಳ್ಳಲೇ ಬೇಕಲ್ಲಮ್ಮಾ.. ಸುಮ್ನೆ ಅಳುವುದು ಯಾಕೆ? ನನ್ನ ಬದುಕು ಬೆಳಗಲು ಬಾಪಾ ಸ್ವತ ಉರಿದು ಬೂದಿಯಾಗ ಬೇಕಾ ಉಮ್ಮಾ....."? ಎಂಬ ಪ್ರಶ್ನೆಯನ್ನು ಕೇಳಲಾಗದೆ ಮೌನವಾಗಿ ಕಂಬನಿ ಮಿಡಿಯುತ್ತಾ ಮನೆಯಿಂದ ಹೊರಗೆ ಕಾಲಿಕ್ಕಿದೆ.

  ಕಾಲುಗಳು ಸಮೀಪದಲ್ಲಿರುವ ನೀರಿನ ಅಲೆಗಳತ್ತ ಹೆಜ್ಜೆ ಹಾಕ ತೊಡಗಿದವು.ಎದುರಿಗೆ ನೆತ್ತರಿನಂತೆ ಉಕ್ಕುವ ಸಂಜೆಗಡಲು, ದಡವನ್ನಪ್ಪಳಿಸಲು ಪಣ ತೊಟ್ಟು ಒಡೋಡಿ ಬರುವ ತೆರೆಗಳು , ದಡ ಸೇರಿದಾಗ ನೊರೆಯನ್ನಷ್ಟೇ ಕಾರಿ ಹಿಂದಕ್ಕೋಡುವ ಅವುಗಳ ನಿರ್ವೀಯತೆ ನನ್ನದೇ ಎಂದೆನಿಸುತಿತ್ತು. ನಾನು ಅವುಗಳನ್ನೇ ನಿರ್ವೀಕಾರಳಾಗಿ ನೋಡುತ್ತಾ ಕುಳಿತಿದ್ದೆ. ಒಡಲಲ್ಲಿ ಬೆಂಕಿಯ ಕೆಂಡ ಉರಿಯುತಿತ್ತು. ಬದುಕ ಬಂಜರು ಬಯಲಲ್ಲಿ ನಾನಿನ್ನು ಒಂಟಿ ಕಲ್ಲಿನಂತಾಗುವೆನೇ? ಎಂದು ನೆನೆದೇ ಭಯ ಹುಟ್ಟುತಿತ್ತು ನನಗೆ...ನೋವಿನ ತೀವ್ರತೆ ಸಹಿಸಲಾರದೆ ದುಃಖ ಹುಚ್ಚೆದ್ದು ಕುಣಿಯುತಿತ್ತು.ಮನದಲ್ಲಿ ಸಂಕಟ ತಾಂಡವಾಡುತಿತ್ತು. ಮೌನ ಮಡುಗಟ್ಟಿತ್ತು. ರಿಯಾಝ್ ನನ್ನ ಪಾಲಿಗೆ ಕೇವಲ ನೆನಪು ಮಾತ್ರ ಆಗ್ಬಾರದು, ಬಾಳಿನ ಉದ್ದಗಲಕ್ಕೂ ಬದುಕೋ ಕ್ಷಣಗಳಾಗಬೇಕೆಂದು ಅಶಿಸಿದ್ದೆ. ನನ್ನ ಜೀವನದಲ್ಲಿ ನಾನಿಡುವ ಪ್ರತೀ ಯೊಂದು ಹೆಜ್ಜೆಯಲ್ಲೂ ಅವನದೊಂದು ಹೆಜ್ಜೆ ಜೊತೆಯಾಗಿರಬೇಕೆಂದು ಬಯಸಿದ್ದೆ. ಆದರೆ ಅವ ಮಾತ್ರ ನನ್ನನ್ನು ಕೇವಲ ಹಣದ ಬಣ್ಣದಲ್ಲಿ ಕಂಡಿದ್ದ. ದಾಂಪತ್ಯದ ಅರ್ಥವನ್ನು ನೋಟುಗಳಲ್ಲಿ ಹುಡುಕ ಹೊರಟಿದ್ದ, ಹಣದ ಥೈಲಿಯನ್ನು ಬಾಚುವ ಹುನ್ನಾರದಲ್ಲಿ ಪ್ರೀತಿ ಪ್ರೇಮಕ್ಕೆ ಕೊಳ್ಳಿ ಇಟ್ಟಿದ್ದ, ಇಂತಹಾ ವ್ಯಕ್ತಿಯನ್ನು ನಾನು ಇನ್ನು ಮೊದಲಿನ ಹಾಗೆ ಪ್ರೀತಿಸಲು ಸಾಧ್ಯವೇ ?ಅಥವಾ ನಮ್ಮ ದಾಂಪತ್ಯ ಇಲ್ಲಿಗೇ ಕೊನೆಗೊಳ್ಳುವಾವೇ? ದೂರದಲ್ಲಿ ಉಕ್ಕುವ ಕಡಲನ್ನು ತಬ್ಬಿ ಕೊಂಡಂತೆ ಕಾಣುವ ದಿಗಂತವನ್ನೇ ದಿಟ್ಟಿಸುತ್ತಾ ಯೋಚಿಸುತ್ತಿದ್ದೆ. ಸಮಸ್ಯೆ ಬಗೆಹರಿಯಲಾರದೆಂತೆನಿಸಿತು ನನಗೆ.

  ಆತನೇನೋ ನನ್ನ ತಂದೆಯಲ್ಲಿ ಹಣ ಉದುರುವ ಮರವಿದೆಯೆಂದು ಕೊಂಡಿದ್ದನೊಏನೋ?ಮದುವೆಯಾಗಿ ಎರಡೇ ತಿಂಗಳಿಗೆ ಕೊಟ್ಟ ಒಂದು ಲಕ್ಷವನ್ನಲ್ಲದೆ ಮತ್ತೆರಡು ಲಕ್ಷದ ಬೇಡಿಕೆ ಇಟ್ಟಿದ್ದ,ಇಂತಹವನಲ್ಲಿ ನಾನು ಮತ್ತೆ ಜೀವನ ನಡೆಸಬೇಕೆ? ಶಿಥಿಲವಾದ ಪ್ರೀತಿಯನ್ನು ತೇಪೆ ಹಚ್ಚಿ ದಿನ ತೂಗಿಸುವುದು ಕಷ್ಟ ವೆಂದೆನಿಸುತಿತ್ತು.ಬಾಪಾ ಹೇಗಾದರೂ ರಿಯಝ್ ನ ಬೇಡಿಕೆ ಪೋರೈಸುವುದಾಗಿ ಹೇಳಿದ್ದರು. ಆದರೆ ನನಗ್ಯಾಕೋ ಕರುಳಲ್ಲಿ ಕತ್ತರಿ ಇಟ್ಟಂತಾಗುತಿತ್ತು.ಮನ ಮಾತ್ರ ಪವಿತ್ರ ಕುರ್ಆನಿನ ೪ ಅಧ್ಯಾಯದ ೪ ನೇ ಶ್ಲೋಕವನ್ನು ಗುನುಗುಟ್ಟುತ್ತಿದ್ದವು."ಸ್ತ್ರೀ ಯರಿಗೆ ವಿವಾಹ ಧನವನ್ನು ಆತ್ಮ ಸಂತೋಷದಿಂದ (ಕಡ್ಡಾಯವೆಂದರಿತು) ಪಾವತಿ ಮಾಡಿರಿ. ಅವರು ತಮ್ಮಿಷ್ಟದಿಂದ ವಿವಾಹ ಧನದ ಒಂದಂಶವನ್ನು ನಿಮಗೆ ಬಿಟ್ಟು ಕೊಟ್ಟರೆ ನೀವು ಅದನ್ನು ಸಂತೋಷದಿಂದ ಅನುಭೋಗಿಸಿ ಕೊಳ್ಳಬಹುದು" ಆದರೆ ಈಗ ನಡೆಯುತ್ತಿರುವುದಾದರೂ ಏನು? ಇಷ್ಟು ಸಿಂಪಲ್ಲಾದ ವಿವಾಹವು ತೀರಾ ಕ್ಲಿಷ್ಟಕರವಾಗಿ ಇದರ ನೇರ ವಿರುದ್ಧವಾಗಿ ನಡೇಯುವುದಾದರೂ ಯಾಕೆ? ತಾನು ಮುಸ್ಲಿಮನೆಂದು ಬೊಗಳೆ ಬಿಡುವ ಪುರುಷ ಸಮಾಜವು ಧರ್ಮ ಸಮ್ಮತವಾಗಿ ವದು ದಕ್ಷಿಣೆ ಕೊಡುವುದರ ಬದಲು, ಹೆಣ್ಣು ಹೆತ್ತವರ ಬಳಿ ವರದಕ್ಷಿಣೆ ಎಂದು ದೋಚುವುದು ಯಾಕೆ? ಇವರೆಲ್ಲ ಯಾವ ಘನಂದಾರಿ ಪುರುಷಾರ್ಥಕ್ಕಾಗಿ ಮುಸ್ಲಿಮ್ ಸಮುದಾಯವನ್ನು ಅಧಪತನಕ್ಕೆ ತಳ್ಳಲು ಹೊರಟಿರುವುದು? ಎಂದು ಮನದಲ್ಲೇ ದೀರ್ಘ ಮಂಥನ ನಡೆಸುತ್ತಿದ್ದೆ. ಚಿಂತಿಸುವುದು ಹೆಚ್ಚಾಗ ತೊಡಗಿದಂತೆ ತಲೆ ನೋವೂ ಜಾಸ್ತಿಯಾಗ ತೊಡಗಿತು. ಎಲ್ಲವನ್ನೂ ಕರುಣಾಮಯಿಯಾದ ರಬ್ಬಿನಲ್ಲಿ ತವಕ್ಕುಲ್ ಮಾಡಿ, ದುಃಖ ವನ್ನು ತಹಬಂದಿಗೆ ತರಲು ಪ್ರಯತ್ನಿಸುತ್ತಾ ಮನೆಯ ಕಡೆ ಹೆಜ್ಜೆ ಹಾಕಿದೆ. ಮನ ನಾಳಿನ ಸಂಧಾನ ಪ್ರಕ್ರಿಯೆಯೆಯು ಸರಿಯಾಗಲೆಂದು ದುವಾ ಮಾಡುತಿತ್ತು.

  ನೆರೆದಿದ್ದ ಜನರ ಮುಂದೆ ಆತ ಒಂದೇ ಸಮನೆ ಹಣಕ್ಕಾಗಿ ಪಟ್ಟು ಹಿಡಿದಿದ್ದ,ಈ ಸಂಧಾನ ಪ್ರಕ್ರಿಯೆ ಯಾಕೋ ಸರಿಯಾಗದ್ದು ಕಾಣಿಸದಿದ್ದಾಗ ನಾನು ವಿಧಿ ಇಲ್ಲದೆ ಅತ್ತ ನಡೆದಿದ್ದೆ. ತುಂಬಿದ ಜನರೆಡೆಯಲ್ಲಿ ನಿಲ್ಲಲು ಮನಸ್ಸು ಅಳುಕಿದರೂ, ಮನಸ್ಸಿಗೆ ಭಂಡ ಧೈರ್ಯ ತಂದು ಕೊಂಡು ಗಟ್ಟಿಯಾಗಿ ನಿಂತು ಅವನೊಡನೆ ಮೆಲ್ಲನೆ ಧ್ವನಿ ಬಿಚ್ಚ ತೊಡಗಿದೆ......"ಬಾಪಾ ನನ್ನ ಬಾಳು ಬೆಳಗಳು ನಿಮ್ಮ ಬೇಡಿಕೆಯನ್ನು ತನ್ನ ಶಕ್ತಿ ಮೀರಿಯಾದರೂ ಪೊರೈಸಬಹುದು. ಆದರೆ ಅದಕ್ಕೆ ಯಾಕೋ ನನ್ನ ಮನ ಸ್ಪಂದಿಸುತ್ತಿಲ್ಲ. ನನ್ನ ಕನಸುಗಳಿಗೆ ಬಣ್ಣ ತುಂಬ ಬೇಕಿದ್ದ ನೀವು ಮಣ್ಣು ತುಂಬಿದ್ದೀರಿ, ಮನುಷ್ಯನ ಭಾವನೆಗಳಿಗಿಂತ ಹಣಕ್ಕೇ ಫ್ರಧಾನ ಕೊಡುತ್ತಿರುವ ನಿಮ್ಮೊಡನೆ ಇನ್ನು ಬದುಕಲು ನನಗೆ ಸಾಧ್ಯವಾಗಬಹುದೆ? ಇಂತಹಾ ಕೆಲವೊಂದು ಪ್ರಶ್ನೆಗಳೊಡನೆ ಅವ್ಯಕ್ತ ಭಯವೂ ನನ್ನ ಮನದಲ್ಲಿ ಬೇರೂರಿದ್ದರಿಂದ ಅದನ್ನು ಜರೂರಾಗಿ ನಿಮ್ಮಲ್ಲಿ ತೆರೆದಿಡಲೇ ಬೇಕೆಂಬ ಹಂಬಲದಿಂದ ಹೇಳುತಿದ್ದೇನೆ.ಇದಕ್ಕೆ ಕರಾರುವಕ್ಕಾಗಿ ಉತ್ತರ ನಿಮ್ಮಲ್ಲಿದ್ದರೆ ನನ್ನ ಭಾಗ್ಯ".ಎಂದು ರಿಯಾಝ್ ನನ್ನು ಕಣ್ಣ ಕೊನೆಯಲ್ಲಿ ನಿರುಕಿಸುತ್ತಾ ಮಾತನ್ನು ಮುಂದುವರಿಸ ತೊಡಗಿದೆ." ನಾವೆಲ್ಲರೂ ಈ ಬದುಕು ಕ್ಷಣಿಕ ನಶ್ವರ ಎಂದು ಪ್ರತೀ ಕ್ಷಣವೂ ಮರಣದ ಸತ್ಯಾ ಸತ್ಯತೆಯನ್ನು ಅರ್ಥ ಮಾಡಿ ಬದುಕುವವರು, ಆದರೆ ನೀವು ಬದುಕು ಶಾಶ್ವತ ವೆಂದು ಕೊಂಡು ಹಣ ಮಾತ್ರ ಜೀವನ ವೆಂದು ಕೊಂಡು ಸಂಪತ್ತನ್ನು ಹೆಚ್ಚಾಗಿ ಮೋಹಿಸುತ್ತೀರಿ. ನೀವು ಜೀವಕ್ಕಿಂತಾ ಹೆಚ್ಚಾಗಿ ಪ್ರೀತಿಸುತ್ತಿರುವ ಈ ಸಂಪತ್ತು ನಿಮ್ಮನ್ನು ಒಂದಿಲ್ಲೊಂದು ದಿನ ಮರಣದ ದವಡೆಯಿಂದ ಪಾರು ಮಾಡಲು ಸಾಧ್ಯವೇ? ಅಥವಾ ಅದೇ ಸಂಪತ್ತಿನಿಂದ ನೀವು ಎಂದೆಂದಿಗೂ ಅಜರಮರರಾಗಿ ಬದುಕಲು ಸಾಧ್ಯವೇ? ನನ್ನ ಬಾಪಾ ಮಗಳ ಬದುಕು ಬೆಳಗಳೆಂದು ಮಜ್ ಬೂರಾಗಿ ಮನೆಯನ್ನು ಅಡವಿಟ್ಟು ಕೊಡುವ ಹರಾಮಿನ ಬಡ್ಡಿ ಹಣಕ್ಕೆ ಬದಲಾಗಿ ನೀವು ನನಗೆ ಬಾಳು ಕೊಡಬಹುದು. ಆದರೆ ನಾಳೆ ಅಲ್ಲಾಹನ ಮುಂದೆ ಆ ಹರಾಮಿನ ಹೊರೆಯನ್ನು ನೀವು ಹೊತ್ತು ಕೊಳ್ಳಲು ಸಾಧ್ಯವೇ? ಎಷ್ಟೇ ದೊಡ್ಡ ಸ್ಥಿತಿವಂತನಾದರೂ ಬಡವನಾದರೂ ಒಂದಿಲ್ಲೊಂದು ದಿನ ಈ ಲೋಕಕ್ಕೆ ವಿದಾಯ ಹೇಳಲೇ ಬೇಕು. ನಾವು ಜಡ ವಸ್ತು ವಾಗಿ ಈ ಲೋಕದಿಂದ ಪ್ರಯಾಣ ಮಾಡುವಾಗ ನಮ್ಮಲ್ಲಿರುವುದು ಖಾಲಿ ಮೂರು ತುಂಡು ಬಟ್ಟೆ ಮಾತ್ರ, ಇಲ್ಲಿ ಕರಿಯ ಬಿಳಿಯನಾದರೂ ಬಡವ ಬಲ್ಲಿದನಾದರೂ ಎಲ್ಲರಿಗೂ ಒಂದೇ ಇಬ್ಬಗೆಯ ನೀತಿ, ಇದರಲ್ಲಿ ಭೇದ ಬಾವವಿಲ್ಲ.ಆದರೆ ನೀವು ಅದಲ್ಲದೆ ನನ್ನ ತಂದೆಯ ರಕ್ತ ಮಾಂಸ ಬೆವರೊಡನೆ ಚೆಂಡಾಡಿ ತೆಗೆದ ಆ ಹಣವನ್ನು ಜೊತೆಯಾಗಿ ಕೊಂಡೊಯ್ಯಲು ಸಾಧ್ಯವೆ? ಒಂದು ವೇಳೆ ಕೊಂಡೊಯ್ದರೂ ಮಣ್ಣಿನಿಂದ ಸ್ರಷ್ಟಿಯಾದ ಮಾನವ ಮಣ್ಣಾಗುವುದು ಸಹಜ. ಆದರೆ ಆ ಹಣ ನಿಮ್ಮೊಡನೆ ಮಣ್ಣಾಗದೆ ಹಾಗೆಯೇ ಉಳಿಯಲು ಸಾಧ್ಯವೇ ? ಹೇಳಿ "?ಎಂದು ನಾನು ಪ್ರಶ್ನಿಸುವುದನ್ನು ನಿಲ್ಲಿಸಿ ಅವನ ಮುಖವನ್ನೇ ನೋಡ ತೊಡಗಿದೆ.

  ಅಲ್ಲಿ ಕುಳಿತಿದ್ದವರೆಲ್ಲರೂ ಅಪ್ರತಿಭರಾಗಿ ನನ್ನನ್ನೇ ದಿಟ್ಟಿಸುತಿದ್ದರು. ಕೆಲವರ ನೋಟಗಳಲ್ಲಿ ದ್ವೇಷವಿದ್ದರೆ ಇನ್ನು ಕೆಲವರಲ್ಲಿ ಮೆಚ್ಚುಗೆಯ ಭಾವವಿತ್ತು. ಮತ್ತಲವರಲ್ಲಿ ಕೋಪದ ಛಾಯೆಯಿತ್ತು.ತಂದೆ ಮಾತ್ರ ಭಯ ಹಾಗೂ ದುಃಖ್ಖದಿಂದ ಹಿಡಿಯಷ್ಟಾಗಿ ಹೋಗಿದ್ದರು ಎಂಬುವುದಕ್ಕೆ ಅವರ ಮುಖವೇ ಸಾಕ್ಷಿಯಾಗಿತ್ತು.ನಾನು ಅಲ್ಲಿ ನಿಲ್ಲದೆ ಸೀದಾ ಒಳಗೆ ನಡೆದೆ.ಮನದಲ್ಲಿ ದುಃಖ ಕೊತಕೊತನೆ ಕುದಿಯುತಿತ್ತು. "ಎಂತಹಾ ಮಾತನಾಡಿದ್ದು ಮೋಳೇ..? ಹೆಣ್ಣು ಮಕ್ಕಳಿಗೆ ಇದು ಭೂಷಣವಾ"? ಎಂದು ಕೇಳುತ್ತಾ ಉಮ್ಮಾ ನನ್ನ ಹಿಂದೆಯೇ ಬಂದಿದ್ದರು. ಕಿಟಕಿಯ ಕಂಬಿಗಳನ್ನು ಗಟ್ಟಿಯಾಗಿ ಹಿಡಿಯುತ್ತಾ ಸರಳುಗಳಿಗೆ ತಲೆಯಾನಿಸಿ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ. ಮನದ ನೋವನ್ನೆಲ್ಲಾ ಕಾರಿದ ಮೇಲೆ ದುಃಖ ಕಟ್ಟೆಯೊಡೆದಿತ್ತು. ಹೊರಗಿನ ಹಾಲ್ ನಲ್ಲಿ ಜೋರು ಜೋರಾಗಿ ಧ್ವನಿ ಕೇಳಿ ಬರತೊಡಗಿದಾಗ, ಉಮ್ಮ ಭಯದಿಂದ ಬೆವರ ತೊಡಗಿದರು. ಏನಾಗುತ್ತದೋ ಏನೋ ಎಂದು ಅವರು ಕಾಲು ಸುಟ್ಟ ಬೆಕ್ಕಿನಂತೆ ಶಥ ಪಥ ತಿರುಗುತ್ತಿದ್ದರು. ಹಾಲೆಲ್ಲಾ ನಿಶ್ಯಬ್ಧ ವಾದ ಮೇಲೆ ಬಾಪಾ ದುಃಖದಿಂದ ನನ್ನನ್ನು ನೋಡುತ್ತಾ "ಎಂತಹಾ ಕೆಲಸ ಮಾಡಿದೆ ಮೋಳೇ..ಬಂದವನನ್ನು ನಿನ್ನ ಮಾತಿನ ವಾಗ್ದಾಳಿಯಿಂದ ಓಡಿಸಿ ಬಿಟ್ಟೆಯೆಲ್ಲಾ..ಇನ್ನೇನು ಮಾಡೋದು"? ಎಂದು ಸಣ್ಣಗೆ ನಡುಗುತ್ತಾ ಕೋಪದಿಂದ ಹೇಳಿದರು. ನಾನು ತುಂಬಿದ ನಯನ ಗಳೊಂದಿಗೆ ಬಾಪಾನಾ ಮುಖವನ್ನೇ ದಿಟ್ಟಿಸುತ್ತಾ ಮೌನವಾಗಿ ಅಳತೊಡಗಿದೆ.ನನಗಾದರೂ ಹಗೆಲ್ಲಾ ಹೇಳಲು ಮನಸಿತ್ತೇ ? ಬದುಕಿನ ಬಂಡಿ ತೀರಾ ತುಂಡಾಗಲು ತೊಡಗಿದಾಗ ವಾಸ್ತವದ ಸತ್ಯವನ್ನು ಅರಿವಾಗಿಸಲು ಪ್ರಯಥ್ನ ಪಟ್ಟೆ, ಇದು ತಪ್ಪಾ? ಅಲ್ಲದೆ ತಿಂಗಳಿಗೊಮ್ಮೆ ಹಣಕ್ಕಾಗಿ ಪೀಡಿಸುವವನು ನನ್ನನ್ನು ಸುಖವಾಗಿಡಬಲ್ಲನೇ? ಇದು ಯಾಕೆ ಬಾಪಾನಿಗೆ ಅರ್ಥವಾಗುವುದಿಲ್ಲ? ನನ್ನ ಬಾಪಾ ಕೊಟ್ಟ ಹಣದಿಂದ ಅವ ನನ್ನನ್ನು ಸಾಕಬೇಕೆ? ಎಂದು ನಾನು ನನ್ನಲ್ಲೇ ಪ್ರಶ್ನಿಸುತ್ತಿದ್ದೆ.

  ದಿನಗಳು ಯಾಂತ್ರಿಕವಾಗಿ ಉರುಳುತಿತ್ತು. ಬದುಕು ತೀರಾ ಸಪ್ಪೆ ಎನಿಸತೊಡಗಿತ್ತು. ಹಿಂದಿನ ರಾತ್ರಿ ಕೀ ಕೊಟ್ಟು ಮಲಗಿದ ಗಡಿಯಾರದಂಗೆ ಸಾಗುತಿತ್ತು ಬದುಕು. ಬಾಪಾನಾ ಮನದೊಳಗಿನ ದುಃಖ ಮುಖದ ಮೇಲೆ ಎದ್ದು ಕಾಣತೊಡಗಿದ್ದವು. ನಾನು ಬಾಪಾನಿಗೆ ಹೊಸ ತಲೆ ನೋವನ್ನು ಕೊಡುವಂತಾದೆನೇ? ಎಂದು ನನ್ನೊಳಗೇ ನಾನು ಸಾವಿರಾರು ಬಾರಿ ಯೋಚಿಸಿ ಯೋಚಿಸಿ ಸುಸ್ತಾಗಿದ್ದೆ. ರಬ್ಬೇ ಇದೆಲ್ಲದಕ್ಕೂ ಒಂದು ಪರಿಹಾರ ಕಾಣಿಸು ನೀನಲ್ಲದೆ ಇದಕ್ಕೆ ಪರಿಹಾರ ಕಾಣಿಸುವವನು ಬೇರೆ ಯಾರೂ ಇಲ್ಲ ರಬ್ಬೇ... ಎಂದು ಎರಡೂ ಕೈಗಳನ್ನು ಮೇಲಕ್ಕೆತ್ತಿ ಮನನೊಂದು ಪ್ರಾರ್ಥಿಸುತ್ತಾ ಕುಳಿತಿದ್ದೆ. ತಂದೆ ಗಡಿಬಿಡಿಯಿಂದ ಬರುತ್ತಾ "ಸಾಕಿರಾ ಬೇಗ ಹೊರಡು ಬೇಗ..... "ಎಂದು ಅವಸರ ಅವಸರ ವಾಗಿ ಹೊರಡಿಸಿ ನನ್ನನ್ನು ಹಾಸ್ಪಿಟಲ್ಲಿಗೆ ಕರೆ ತಂದಿದ್ದರು. ರಿಯಾಝ್ ಹಾಸ್ಪಿಟಲ್ ಬೆಡ್ಡಲ್ಲಿ ಕೈ ಕಾಲು ಹಣೆಗೆ ಬ್ಯಾಂಡೇಜು ಬಿಗಿದು ಮಲಗಿದ್ದ ನಾನು ಬೆಪ್ಪಳಂತೆ ಅವನ ಮುಖವನ್ನೇ ತದೇಕ ಚಿತ್ತದಿಂದ ದಿಟ್ಟಿಸುತ್ತಿದ್ದೆ. ತಂದೆ ಮೆಲ್ಲನೆ ಹೇಳುತ್ತಿದ್ದರು.. ಬೈಕ್ ಆಕ್ಸಿಡೆಂಟಂತೆ ಸಾಕಿರಾ...ಅವ ತೆಗೆದ ಲಕ್ಷ ಹಣವನ್ನು ಹಿಂದಿರುಗಿಸಲೆಂದು ಮನೆಗೆ ಬರುವಾಗ ಈ ಆಕ್ಸಿಡೆಂಟ್ ಆದದ್ದಂತೆ, ತಂದೆಯ ಮಾತು ಕೇಳಿ ನಾನು ಅವನನ್ನೇ ನೋಡ ತೊಡಗಿದೆ. ಆತ ನನ್ನನ್ನೇ ನೋಡುತ್ತಾ "ಸಾಕಿರಾ" ಎಂದು ಕರೆದ,. ನಾನು ಆ ಕ್ಷಣದಲ್ಲಿ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದಂತಹಾ ಸಂದಿಗ್ಧ ಸ್ಥಿತಿಯಲ್ಲಿದ್ದೆ. ಆತ ಮತ್ತೊಮ್ಮೆ ಕರೆದ "ಸಾಕಿರಾ.... ನಾನು ಮ್... ಮ್... "ಎಂದವನ ಕರೆಗೆ ಓ ಗೊಡುತ್ತಾ ಹತ್ತಿರ ನಿಂತಿದ್ದೆ."ಸಾಕಿರಾ ಇಹದ ಈ ಕ್ಷಣಿಕ ಬದುಕಿನಲ್ಲಿ ಮನುಷ್ಯ ಎಷ್ಟೊಂದು ದುರ್ಬಲನಲ್ವಾ? ನಮಗಿರುವ ಆಯುಷ್ಯ ಇನ್ನು ಕೆಲವೇ ಕ್ಷಣಗಳೋ ನಿಮಿಷಗಳೋ ಗಂಟೆಗಳೋ, ದಿನಗಳೋ ತಿಂಗಳೋ ವರ್ಷವೋ.....,ಎಂದು ಯೋಚಿಸದೆ ಎಂತಹಾ ಅಜ್ಣಾನ ದಿಂದ ಬದುಕುತಿದ್ದೇವಲ್ಲಾ..."? ಎಂದು ಆಗ ತಾನೇ ಭೋಧ್ಯ ಪೆಟ್ಟಂತೆ ನನ್ನ ಕೆಯ್ಯನ್ನು ಭಧ್ರ ವಾಗಿಡಿಯುತ್ತಾ ಹೇಳುತಿದ್ದ.ನಾನು ಮನದಲ್ಲೇ.., ಈ ಸತ್ಯ ಅರಿವಾಗಿಸಲು ವಿಧಿ ಅವನಿಗೆ ಆಕ್ಸಿಡೆಂಟ್ ರೂಪದಲ್ಲಿ ಪಾಠ ಕಲಿಸಿತ್ತೇ...? ಎಂದು ಧುಮ್ಮಿಕ್ಕಿ ಬರುವ ದುಃಖವನ್ನು ಹತೋಟಿಯಲ್ಲಿಡಲು ಪ್ರಯತ್ನಿಸುತ್ತಾ, ಕಿರುಗಣ್ಣಿನಲ್ಲೇ ಅವನನ್ನು ನಿರುಕಿಸುತ್ತಾ ಯೋಚಿಸುತ್ತಿದ್ದೆ.ಆತ ಮತ್ತೂ "ಸಾಕಿರಾ.. ನನ್ನನ್ನು ಕ್ಷಮಿಸುತ್ತಿಯಾ ನಾನು ಕ್ಷಮೆಗೆ ಅರ್ಹನಲ್ಲದಿದ್ದರೂ "ಎಂದು ನೋವಿನ ಧ್ವನಿಯಲ್ಲಿ ನನ್ನ ಕೈ ಹಿಡಿದು ಪಿಸುಗುಟ್ಟುತ್ತಿದ್ದ. ನಾನು ಹಿಂತಿರುಗಿ ನೋಡಿದೆ, ಉಮ್ಮ ಬಾಪಾ ಆವಾಗಲೇ ಹೊರ ನಡೆದಿದ್ದರು. ಅಲ್ಲಿ ನಾನು ಮತ್ತು ಅವ ಮಾತ್ರ, ನಾನು ತುಂಬಿದ ನಯನಗಳೊಂದಿಗೆ ಅವನನ್ನೇ ನೋಡತೊಡಗಿದೆ. ಅವ ನನ್ನ ಕೈಯನ್ನು ಭದ್ರವಾಗಿಡಿದಿದ್ದ.. ಇನ್ನೆಂದೂ ಈ ಕೈಯನ್ನು ಬಿಟ್ಟು ಬಿಡಲಾರೆ ಎಂಬತೆ, ಮಾಡಿದ ತಪ್ಪಿಗೆ ಕ್ಷಮೆಯಾಚಿಸುತ್ತಾ......’
  posted by ASHRAF @ 2:38 AM  
  0 Comments:

  Post a Comment

  << Home
   
  About Me

  Name: ASHRAF
  Home: India
  About Me: ಅಸ್ಸಲಾಮ್ ಅಲೈಕುಮ್
  See my complete profile
  Previous Post
  Archives
  ನಾ ಬರೆದದ್ದು
  Powered by

  BLOGGER

  Older Posts
  © 2005 ನೇರದಾರಿ Blogger Templates by Isnaini and Cool Cars Pictures