ನೇರದಾರಿ

ಈ ಜೀವನ ಎಂಬ ಪ್ರಯಾಣದಲ್ಲಿ ನಾವು ಸಂಧಿಸುವ ವ್ಯಕ್ತಿಗಳು ಆಕಸ್ಮಿಕ,ಅಗಲಿಕೆ ಅನಿವಾರ್ಯ, ಹಾಗೆಯೇ ಅವರವರ ನಿಲ್ದಾಣ ಬಂದ ಕೂಡಲೇ ಇಳಿಯಲೇ ಬೇಕು.ಕೆಲವರು ದೀರ್ಘ ಪ್ರಯಾಣ ಮಾಡಬಹುದು.ಇನ್ನು ಕೆಲವರು ಸಮೀಪ ಪ್ರಯಾಣದಲ್ಲಿರಬಹುದು.ನಾವೀಗ ಈ ಪ್ರಯಾಣದ ಯಾವ ಸ್ಟೇಜ್ ನಲ್ಲಿದ್ದೇವೆಂದು ಬಲ್ಲವನು ಒಬ್ಬನೇ (ಅಲ್ಲಾಹ್)ಅವನೇ ನಮ್ಮೆಲ್ಲರ ಸರ್ವ ಪಾಲಕ.ಅವನಲ್ಲದೆ ಬೇರೆ ಆರಾಧ್ಯನಿಲ್ಲ.ಅಲ್ಲಾಹ್ ನಮ್ಮೆಲ್ಲರ ಕೊನೆಯ ಪಯಣವನ್ನು ಸುಗಮ ಗೊಳಿಸಿ, ನಮ್ಮೆಲ್ಲರನ್ನು ಜನ್ನತುಲ್ ಫಿರ್ದೌಸ್ ನಲ್ಲಿ ಒಂದು ಗೂಡಿಸಲಿ

 
>
 • ಹದೀಸ್ ಗ್ರಂಥಗಳಿಂದ
  ಮುಆವಿಯಾ(ರ)ರಿಂದ ವರದಿ: ಪ್ರವಾದಿ(ಸ) ಹೇಳಿದರು: ಅಲ್ಲಾಹನು ಯಾರಿಗಾದರೂ ಒಳಿತನ್ನು ಬಯಸಿದರೆ ಅವನು ಆತನಿಗೆ ಧಾರ್ಮಿಕ ಜ್ಞಾನವನ್ನು ನೀಡುತ್ತಾನೆ. (ಬುಖಾರಿ ಮತ್ತು ಮುಸ್ಲಿಮ್)
  ಸೂರಃ ಆಲು ಇಮ್ರಾನ್ 3:110
  ನೀವು (ನಾವು ಮುಸ್ಲಿಮರು) ಮನುಷ್ಯರಿಗಾಗಿ ಹೊರತರಲ್ಪಟ್ಟ ಉತ್ತಮ ಸಮುದಾಯವಾಗಿರುವಿರಿ. ಇಸ್ಲಾಮ್ ಆದೇಶಿಸಿದ ಎಲ್ಲವನ್ನೂ ನೀವು ಮಾಡುತ್ತೀರಿ ಮತ್ತು ಇಸ್ಲಾಮ್ ವಿರೋಧಿಸಿದ ಎಲ್ಲದರಿಂದಲೂ ನೀವು ದೂರವುಳಿಯುವಿರಿ. ಮತ್ತು ನೀವು ಅಲ್ಲಾಹನಲ್ಲಿ ವಿಶ್ವಾಸವಿರಿಸುವಿರಿ. ಗ್ರಂಥ ನೀಡಲ್ಪಟ್ಟ ಜನರು (ಯಹೂದ ಮತ್ತು ಕ್ರೈಸ್ತರು) ವಿಶ್ವಾಸವಿರಿಸುತ್ತಿದ್ದರೆ, ಅದು ಅವರಿಗೆ ಒಳಿತಾಗಿರುತ್ತಿತ್ತು. ಅವರಲ್ಲಿ ಕೆಲವರಿಗೆ ವಿಶ್ವಾಸವಿದೆ. ಆದರೆ ಅವರಲ್ಲಿ ಹೆಚ್ಚಿನವರೂ ಫಾಸಿಕೂನ್ (ಅಲ್ಲಾಹನಿಗೆ ಅವಿಧೇಯರೂ, ಅಲ್ಲಾಹನ ಆಜ್ಞೆಗಳನ್ನು ಧಿಕ್ಕರಿಸುವವರೂ ಆಗಿದ್ದಾರೆ).
  ಇಣುಕಿ ಹೋದವರು

  satyasandesha
  ಈಗ ನೋಡುತ್ತಿರುವವರು
  ವೀಕ್ಷಣಾಗಾರರ ಸ್ಥಳ
  Locations of visitors to this page
  ಇಷ್ಟರವರೆಗೆ ಬರೆದದ್ದು
  kathe
  Monday, June 8, 2009
  ಹುಚ್ಚ  ಆಕಾಶವೆಲ್ಲ ದಟ್ಟ ಮೋಡಗಳಿಂದೊಡ ಗೂಡಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಮಳೆ ಬರಬಹುದು, ಎನ್ನುವಂತಿತ್ತು.ಗಾಳಿ ತನ್ನ ಒಡಳೊಳಗೆ ಚಳಿಯನ್ನು ತುಂಬಿಕೊಂಡು ಬೀಸುತಿತ್ತು.ಮನ ನನ್ನೆಲ್ಲಾ ಆಶೋತ್ತರಗಳನ್ನು
  ಬುಡ ಮೇಲು ಮಾಡಿದ್ದರೂ, ನಾನು ನನ್ನ ನಡಿಗೆಯಲ್ಲಿ ಚುರುಕು ತುಂಬಿಸುತ್ತಾ,ಹೆಜ್ಜೆಯ ವೇಗವನ್ನು
  ಹೆಚ್ಚಿಸಿದೆ.
  ಇನ್ನೂ ಒಂದೆರಡು ಮನೆಗಳಿಗೆ ಅಲೆದಾಡಿದರೆ, ಹತ್ತೋ ಇಪ್ಪತ್ತೋ ಜಾಸ್ತಿ ಸಿಗಬಹುದೆಂಬ
  ಹುಚ್ಚು ಆಲೋಚನೆಯು ನನ್ನ ನಡಿಗೆಯ ವೇಗವನ್ನು ಹೆಚ್ಚಿಸಿತು.ಊರುಗೋಲನ್ನು ನೆಲಕ್ಕೆ ಊರಿಕೊಂಡು ಒಂಟಿ
  ಕಾಲಿನಲ್ಲಿ ವೇಗವಾಗಿ ನಡೆಯುತ್ತಿದ್ದೆ. ಕೈ ಇವತ್ತಿನ ಅಲೆದಾಟದಾಟದಲ್ಲಿ ಸಿಕ್ಕಿದ ಹಣವನ್ನು ಮೆಲ್ಲನೆ
  ಅಪ್ಯಾಯಮಾನತೆಯಿಂದ ಕಿಸೆಯನ್ನು ಸವರುತಿದ್ದವು,
  ಬೆಳಿಗ್ಗೆಯಿಂದ ಸಂಜೆಯವರೆಗೂ ಅಲೆದಾಡಿದರೂ ಹಣ ಮಾತ್ರ ಇನ್ನೂ ನೂರೈವತ್ತು
  ದಾಟಿರಲಿಲ್ಲ, ಮದುವೆಗೆ ಕೇವಲ ಇನ್ನು ಏಳೆಂಟು ದಿನ ಬಾಕಿಯಿದ್ದರೂ ವರದಕ್ಷಿಣೆ ಹಣ ಇನ್ನೂ
  ಹೊಂದಿಸಲಿಕ್ಕೆ ಆಗದಿರುವ ನನಗೆ ನನ್ನ ಮೇಲೆಯೇ ಜಿಗುಪ್ಸೆಯಾಗುತಿತ್ತು, ಛೆ..: ನಾನೀಗ ಏನು ಮಾಡಲಿ. .?
  ಹೇಗೆ ನಾನು ಈ ಒಂದು ಲಕ್ಷವನ್ನು ಹೊಂದಿಸಲಿ.? ನನ್ನ ಮಗಳ ಮದುವೆಯನ್ನು ಹೇಗೆ ಸಮರ್ಪಕವಾಗಿ
  ನಿರ್ವಹಿಸಲಿ ನಾನು.?ಮನದೊಳಗೆ ಭಯಂಕರವಾದ ಅಲೋಚನೆಗಳ ಅಗ್ನಿ ಶಿಲೆಗಳು ಅಸ್ಪೋಟಿಸ
  ತೊಡಗಿದ್ದವು.
  ?ಕಾಲುಗಳು ಮನದ ಬೇಗುದಿಯನ್ನು ಸಹಿಸಲಾರದೆ ಇನ್ನು ನಡೆಯಲಾರೆನೆಂದು ಮುಷ್ಕರ ಹೂಡುತ್ತಿದ್ದವು.ಊರುಗೋಲನ್ನು ಬದಿಗಿಟ್ಟು ಆ ದೊಡ್ಡದಾದ ಆಲದ ಮರದಡಿಯಲ್ಲಿ ಕುಸಿದು ಕುಳಿತಿದ್ದೆ, ಎದೆಯಲ್ಲಿ ದುಃಖದ ಲಾವಾರಸ ಕೊತಕೊತನೆ ಕುಣಿಯುತಿದ್ದವು. ಮನದಲ್ಲಿ ಮಗಳ ಬದುಕಿನ ಕರಾಳತೆ ನನ್ನ ಕಣ್ಣ ಮುಂದೆ ಕುಣಿಯುತಿದ್ದವು.
  ಏನು. . ಏನು. ಮಾಡಲಿ ನಾ?॒ ಮಗಳ ಮದುವೆಯನ್ನು ಹೇಗೆ ನಿರ್ವಿಘ್ನವಾಗಿ ನೆರವೇರಿಸಲಿ . . . ?ಇದಕ್ಕಾಗಿ ಎಷ್ಟೊಂದು ಮನೆ ಮನೆಗೆ ಅಲೆದಾಡಿ ಅವರಿವರ ಕುಹಕ ನುಡಿ , ಉರಿ ನೋಟ, ಎಲ್ಲವನ್ನೂ ಸಹಿಸಿ ದೇಹವನ್ನು ಮುಷ್ಟಿಯಲ್ಲಿಡಿದು ಕೈ ಚಾಚಿ ಬೇಡಿದರೂ ಹಣ ಮಾತ್ರ ಇನ್ನೂ ಐವತ್ತು ಸಾವಿರವನ್ನು ದಾಟಿರಲಿಲ್ಲ, ಒಂದು ಲಕ್ಷಕ್ಕೆ ಇನ್ನೂ ಐವತ್ತು ಸಾವಿರ ಬಾಕಿ ಇತ್ತು. ಇನ್ನು ನಾ ಈ ಐವತ್ತು ಸಾವಿರವನ್ನು ಹೇಗೆ ಹೊಂದಿಸಲಿ.? ಎಂಬ ಪ್ರಶ್ನೆ ಯಕ್ಷವಾಗಿಯೇ ನನ್ನ ಕಣ್ಣ ಮುಂದೆ ಗಿರಿಗಿಟ್ಟಿಯಾಗಿ ತಿರುಗುತಿದ್ದವು. ಇನ್ನು ಈ ಹಣಕ್ಕಾಗಿ ನಾ ಯಾರ ಕಾಲು ಹಿಡಿಯಲಿ . . ? ಎಂದು ಅಸಹಾಯ ಕತೆಯಿಂದ ಕೈ ಚೆಲ್ಲಿ ಕುಳಿತಿದ್ದೆ ನಾನು. ಕಣ್ಣಲ್ಲಿ ಅಶ್ರು ಹನಿಗಳು ಬಿಂದು ಬಿಂದಾಗಿ ಹರಿಯ ತೊಡಗಿ ನನ್ನ ಅಸಹಾಯ ಕತೆಯನ್ನು ಎತ್ತಿ ತೋರಿಸುತ್ತಿದ್ದವು.
  ವರದಕ್ಷಿಣೆ ಈ ಅನಿಷ್ಟ ಪದ್ಧತಿಯನ್ನು ಯಾರು ಜಾರಿಗೆ ಗೊಳಿಸಿದರೋ ಏನೋ? ಒಂದು ಹೆಣ್ಣು ಮತ್ತು ಗಂಡು ಸಂಸಾರ ಹೂಡಲು ಸೇತುವೆಯಾಗಬೇಕು. ಅದು ಬಿಟ್ಟು ಮದುವೆ ಇನ್‌ಸ್ಟಾಲ್ ಮೆಂಟ್ ಮಟ್ಟಕ್ಕಿಳಿದಿರುವುದು ಯಾವುದರ ಪ್ರತಿಬಿಂಬ ವಿರಬಹುದು ಇದು . .? ನಮ್ಮ ಜನ ನೈತಿಕತೆ ಕಳೆದು ಕೊಳ್ಳುತ್ತಿದ್ದಾರ. . .? ಅರ್ಥವಾಗಲಿಲ್ಲ ನನಗೆ,
  ಅದೆಷ್ಟೋ ಹೊತ್ತು ಅದೇ ಭಂಗಿಯಲ್ಲಿ ಕುಳಿತು ಯೋಚಿಸುತ್ತಿದ್ದೆ ನಾನು. ಮುಖಕ್ಕೆ ಮಳೆ ಹನಿಯೊಂದು ತಟ್ಟಕ್ಕನೆ ಮುತ್ತಿಟ್ಟಾಗ ತಟ್ಟನೆ ಯೋಚನೆಯಿಂದ ಹೊರಬಂದು ಊರುಗೋಲನ್ನೆತ್ತಿ ಮೆಲ್ಲನೆ ನಿಧಾನವಾಗಿ ಸೋತ ನಡಿಗೆಯಲ್ಲಿ ಮನೆಯ ಕಡೆ ಹೆಜ್ಜೆ ಹಾಕುತ್ತಿದ್ದೆ. ಮನದಲ್ಲಿ ತಾಯಿಯ ಆಸರೆಯಿಲ್ಲದೆ ಬೆಳೆದ ನನ್ನ ಮಗಳ ಮುಖ ಪದರ ಪದರವಾಗಿ ಮೂಡಿ ಬರುತ್ತಿತ್ತು, ಜೊತೆಗೆ ವೇದನೆ ಕೂಡ ಮನದಲ್ಲಿ ಮಡುಗೊಟ್ಟತೊಡಗಿತ್ತು.
  ಏಯ್.. ವರದಕ್ಷಿಣೆ ಹಣ ಇಲ್ಲಿಡು.; ನಂತರ ನಿಕಾಹ್ . ವರನ ತಂದೆಯ ಗಜ ಗಾಂಭಿರ್ಯ ನುಡಿ ಕೇಳಿ ಬೆಚ್ಚಿ ಬಿದ್ದಿದ್ದೆ ನಾನು, ಕೈಯಲ್ಲಿದ್ದ ಐವತ್ತು ಸಾವಿರವನ್ನು ಅವರ ಕೈಯಲ್ಲಿಡುತ್ತಾ ನನ್ನನ್ನು ಕ್ಷಮಿಸಿ ಬಿಡಿ ಕಾಸಿಮಾಕ ಎಷ್ಟು ಹೆಣಗಾಡಿದರೂ ನೀವು ಕೇಳಿದಷ್ಟು ಮೊತ್ತವನ್ನು ಕೊಡಲಿಕ್ಕಾಗಲಿಲ್ಲ. ಇನ್ನೊಂದೆರಡು ತಿಂಗಳು ಟೈಮ್ ಕೊಡಿ ಅಷ್ಟರಲ್ಲಾಗಲೇ ನಿಮ್ಮ ಬಾಕಿ ಮೊತ್ತವನ್ನು ಪಾವತಿಸಿ ಬಿಡುತ್ತೇನೆ. ದೇಹವನ್ನು ಬಿಗಿ ಹಿಡಿದು ಅಷ್ಟು ಜನರೆದುರಲ್ಲಿ ಇಷ್ಟು ಉಸಿರಿದ್ದೇ ಹೆಚ್ಚು ನಾನು... . .
  ಲೇಯ್.. ಮೂರ್ಖ ಶಿಖಾಮಣಿ ಈ ನಿನ್ನ ಜುಜುಬಿ ಐವತ್ತು ಸಾವಿರ ನಮಗೆ ಬೇಕಾಗಿಲ್ಲ ಕಣೋ. ನಾವೇನು ನಿನ್ನ ಹತ್ತಿರ ಗತಿ ಗೆಟ್ಟು ಬಂದಿದ್ದೇವೆಯಾ..? ಕೇವಲ ಒಂದು ಲಕ್ಷ ಕೊಡಲಿಕ್ಕಾಗದವನು ಈ ಮದುವೆಗೆ ಯಾಕೆ ಒಪ್ಪಿಕೊಂಡದ್ದು.? ಎಂದೆನ್ನುತ್ತಾ ನನ್ನ ಹಣವನ್ನು ನನ್ನ ಮುಖದ ಮೇಲೆಯೇ ಬಿಸಾಕಿದರು ಆ ಕಾಸಿಮಾಕ.. . . . .
  ನಾನು ಆ ಅಹಂಭಾವಿ ಕಾಸಿಮಾಕನವರನ್ನು , ನಾನು ಕಷ್ಟಪಟ್ಟು ಬೇಡಿ ಕೊಟ್ಟ ಹಣವನ್ನೂ ತದೇಕ ಚಿತ್ತದಿಂದ ದಿಟ್ಟಿಸುತ್ತಿದ್ದೆ.ಆ ಹಣಕ್ಕಾಗಿ ಅದೆಷ್ಟು ಪರದಾಡಿದ್ದೆ ನಾನು, ಅದೆಷ್ಟು ಜನರ ಬಾಯಿಂದ ಕುಹಕ ಮಾತನ್ನು ಕೇಳಿದ್ದೆ, ಅದಕ್ಕಾಗಿ ನಾನೆಷ್ಟು ಕಷ್ಟ ಪಟ್ಟಿದ್ದೆ , ನನ್ನ ಬೆವರಿನ ಹನಿ ಮಾತ್ರವಲ್ಲ ರಕ್ತವನ್ನೂ ಮಿಶ್ರಿತಗೊಳಿಸಿ ಅದನ್ನು ಕೊಟ್ಟಿದ್ದೆ ನಾನು , ಆದರೆ ಆ ಹಣ ಜುಜುಬಿ , ನನ್ನನ್ನು ಮೂರ್ಖಶಿಖಾಮಣಿ ಎಂದು ಕರೆದ ಆ ಕಾಸಿಮಾಕನ ಶರ್ಟ್ ಪಟ್ಟಿ ಹಿಡಿದು ನಾಲ್ಕು ಬಿಗಿಯುವಷ್ಟು ಕೋಪ ಬಂದಿತ್ತು ನನಗೆ..
  ಮೂರ್ಖ ನಾನಲ್ಲ ಕಣೋ. ಹೆಣ್ಣಿನ ಕಡೆಯವರಿಂದ ರಕ್ತ ಮಾತ್ರವಲ್ಲ ಪ್ರಾಣವನ್ನೂ ಹಿಂಡುವ ನಿಮ್ಮಂತನರು ಕಣೋ ಶತ ಮೂರ್ಖರು ಎಂದು ಹೇಳುವ ಮನಸ್ಸಾಯಿತು ನನಗೆ.. ಆದರೆ ನನ್ನ ಮನದ ಮಸ್ತಿಸ್ಕದಲ್ಲಿ ಮಗಳ ನಿಸ್ಸಹಾಯಕತೆಯ ಮುಖ ತೇಲಿ ಬಂದು ನನ್ನ ಕೋಪವೆಲ್ಲಾ ಒಮ್ಮೆಲೇ ತಣ್ಣಗಾಯಿತು. ನಾನು ಮೆಲ್ಲನೆ ಏಳುತ್ತಾ ಕಾಸಿಮಾಕನ ಕೈಯನ್ನು ಭದ್ರವಾಗಿಡಿದಿದ್ದೆ,ಕಾಸಿಮಾಕ ನನ್ನಿಂದ ಬಹಳ ದೊಡ್ಡ ತಪ್ಪಾಗೋಯ್ತು, ನನ್ನನ್ನು ಕ್ಷಮಿಸಿ ಮಗಳ ಬಾಳು ಬೆಳಗಳು ಸಹಾಯಕರಾಗಿ ಕಾಸಿಮಾಕ. ಎಂದು ಅವರಲ್ಲಿ ಅಂಗಲಾಚಿ ಬೇಡುತ್ತಿದ್ದೆ ನಾನು.
  ಇಲ್ಲ ಆ ಕಾಸಿಮಾಕ ಮನುಷ್ಯರಲ್ಲ ಮಾನವ ರೂಪದ ಕಲ್ಲು ಬಂಡೆ ಅವರು. ಅಲ್ಲಾಹು ಅವರನ್ನು ಸೃಷ್ಟಿಸುವಾಗ ಹೃದಯ ಹೀನರಾಗಿ ಸೃಷ್ಟಿಸಿದ್ದಾನೋ ಏನೋ..? ನಾನು ಮಾತ್ರವಲ್ಲ ಮದುವೆಯ ಸಂಭ್ರಮದಲ್ಲಿ ಪಾಳ್ಗೊಳ್ಳಲು ಬಂದ ಜನರು ಕೂಡಾ ಅವರಲ್ಲಿ ಎಷ್ಟೊಂದು ಪರಿ ಪರಿಯಾಗಿ ಬೇಡುತ್ತಿದ್ದರು. ಇಲ್ಲ ಆ ಕಾಸಿಮಾಕ ಕರಗಲಿಲ್ಲ . ಅವರು ಕರಗುವವರೂ ಅಲ್ಲ . ಬಂಡೆ ಕಲ್ಲು ಎಂದಾದರು ಹೂ ಬಿಡುವುದುಂಟಾ?
  ನೀನಲ್ಲದಿದ್ದರೆ ಇನ್ನೊಂದು ಸಂಬಂಧ ಹಿಡಿಯಬಹುದು ಕಣೋ ನಮಗೇನು ಸಂಬಂಧಕ್ಕೆ ಬರ ಬಂದಿದೆಯಾ? ಎಂದೆನ್ನುತ್ತಾ ತನ್ನ ಪರಿವಾರದೊಡನೆ ಹೊರಟು ಹೋದ ಆ ಕಾಸಿಮಾಕನವರನ್ನು ಕಣ್ಣೀರಿನ ಕಂಬನಿಯೊಂದಿಗೆ ಅವರು ಹೋದ ದಿಕ್ಕನ್ನೇ ದಿಟ್ಟಿಸುತ್ತಿದ್ದೆ . ಅವರು ಹೋಗುತ್ತಿದ್ದ ದೃಶ್ಯ ನನ್ನ ಕಣ್ಣೀರಿನೊಂದಿಗೆ ಮುಸುಕು ಮುಸುಕಾಗಿ ಕಾಣುತಿತ್ತು.
  ನನ್ನ ಮೈ ರೋಮಗಳೆಲ್ಲ ಎದ್ದು ನಿಂತಿತ್ತು . ಹೃದಯ ಹೊಟ್ಟೆಗೆ ಬಂದಂತಾಗಿತ್ತು. ಕೊಡಲಿಯಿಂದ ಮನಸ್ಸಿಗೆ ಹೊಡೆದ ಹಾಗೆ ಹತಾಶನಾದೆ. ಛೆ.. ನಾನು ಈ ದಿನಕ್ಕಾಗಿ ಎಷ್ಟೊಂದು ಕಾತರದಿಂದ ಕಾಯುತ್ತಿದ್ದೆ.ಮಗಳ ಬಾಳು ಒಂದು ದಡ ಸೇರಿಸಿದ ಸಂತೃಪ್ತಿ ಅದಾಗಲೇ ನನ್ನ ಮನದಲ್ಲಿ ತುಂಬಿ ತುಳುಕಾಡುತಿತ್ತು. ಆದರೆ ಏನಾಗಿ ಹೋಯಿತು ನನ್ನ ಮಗಳ ಬಾಳು? ಇನ್ನು ಅವಳಿಗೆ ಭವಿಷ್ಯವಿದೆಯೆ..? ಕಷ್ಟ ಕಾಲದಲ್ಲಿ ನೆರವಾಗದ ಹಾಳು ಮನುಷ್ಯ ರೂಪಿಗಳ ಬಾಯಿಗಳು ಇನ್ನು ನನ್ನ ಮಗಳನ್ನು ನೇರವಾಗಿ ತಲೆಯೆತ್ತುವಂತೆ ಮಾಡುವಾವೆ..? ಒಟ್ಟಾರೆ ಪ್ರಶ್ನೆಗಳೆಲ್ಲಾ ಕೀಟದಂತೆ ನನ್ನ ಮನವನ್ನು ಕೊರೆಯುತ್ತಿದ್ದವು.
  ನಾನು ಆ ಜನಗಳ ನಡುವೆ ತಲೆಯೆತ್ತಲು ತಾಕತ್ತಿಲ್ಲದವನಂತೆ ತಲೆ ಕೆಳಗೆ ಹಾಕಿ ನನ್ನ ಮಗಳಿಗಾಗಿ ಅರಸುತಿದ್ದೆ. ಸರ್ವಾಲಂಕಾರ ಭೂಷಿತಳಾಗಿ ಮನದೊಳಗೆ ಸಾವಿರ ಶುಭ ನಿರೀಕ್ಷೆಗಳಿಗೆ ನಾಂದಿ ಇಟ್ಟು ಕುಳಿತಿದ್ದ ನನ್ನ ಮಗಳು ಆದಷ್ಟೂ ತನ್ನ ದುಃಖವನ್ನು ಅದುಮಿಡಲು ಶತ ಪ್ರಯತ್ನ ಪಡುತ್ತಿದ್ದಳು.ಜನಗಳೆಲ್ಲ ಮೆಲ್ಲ ಮೆಲ್ಲನೆ ಚದುರುತ್ತಿದ್ದರು. ನಾನು ಮಗಳ ತಲೆ ನೇವರಿಸುತ್ತಾ .. ಸಹಾನುಭೂತಿಯಿಂದ .. ಅಳಬೇಡ ಫ಼ಾತಿಮ... ಅವನಲ್ಲದಿದ್ದರೆ ಇನ್ನೊಬ್ಬ . ದೇವ ಹೆಣ್ಣಿಗೊಂದು ಗಂಡನ್ನು ಸೃಷ್ಟಿ ಮಾಡಿಯೇ ಇರುತ್ತಾನಲ್ಲ.. ಸಹನೆ ತಂದು ಕೊಳ್ಳು ಮಗಳೇ .. ಸಹನೆಗೆ ತಕ್ಕ ಪ್ರತಿಫಲ ಅಲ್ಲಾಹು ಕೊಡುತ್ತಾನೆ . ಎಂದವಳನ್ನು ಸಮಾಧಾನ ಪಡಿಸುತ್ತಿದ್ದೆ.
  ಅವಳು ದುಃಖದಿಂದ ಇಲ್ಲ ಬಾಪಾ .. ಹೆಣ್ಣಿನ ಬಾಳು ಗಾಜಿನಷ್ಟೇ ಸೂಕ್ಷ್ಮವಾದುದು ಅದು ಒಂದು ಸಲ ಒಡೆದು ಹೋದರೆ , ಮತ್ತೆ ಅದನ್ನು ಮೊದಲಿನ ಆಕಾರಕ್ಕೆ ತರೋಕ್ಕಾಗುವುದಿಲ್ಲ. ನಮ್ಮ ಸಮಾಜ ಎಷ್ಟೇ ಮುಂದುವರಿದರೂ ಹೆಣ್ಣಿಗೆ ಮಾತ್ರ ಬಾಳೋಕೆ ಇನ್ನೊಂದು ಅವಕಾಶ ಕೊಡೋದಿಲ್ಲ. ಅದೇ ಗಂಡಾದ್ರೆ ಎಷ್ಟು ಬೇಕಾದ್ರೂ ಮದುವೆಯಾಗಬಹುದು ಆದರೆ ಹೆಣ್ಣಿಗೆ ಮಾತ್ರ ಒಂದೇ ಮದುವೆ ಅಲ್ವಾ ?॒ ಎಂದೇಳುತ್ತ ಬಿಕ್ಕಳಿಸಿತ್ತಿದ್ದಳು ಅವಳು.. ಅವಳ ಮನದಲ್ಲಿ ಭಯಂಕರವಾದ ಸಾಗರದ ಅಲೆಗಳು ಭೋರ್ಗರೆಯುತ್ತಿದ್ದವು ಎಂಬುವುದಕ್ಕೆ ಅವಳ ಕಣ್ಣೀರೇ ಸಾಕ್ಷಿಯಾಗಿದ್ದವು.ಅವಳು ಹೇಳೀದ ಮಾತುಗಳು ಸಾವಿರ ಮುಳ್ಳುಗಳಾಗಿ ಎದ್ದು ಬಂದು ನನ್ನೆದೆಯನ್ನು ಭರ್ಜಿಯಂತೆ ಚುಚ್ಚ ತೊಡಗಿತ್ತು.ನಾನು ಅವಳನ್ನು ಸಮಾಧಾನಿಸಲು ತಾಕತ್ತಿಲ್ಲದವನಂತೆ ಕುಸಿದು ಕುಳಿತೆ.
  ಸ್ನೇಹಿತ್ ಖಾದರ್ ಭುಜದ ಮೇಲೆ ಕೈಟ್ಟು ನನ್ನನ್ನು ಸ್ವಾಂತಾನಿಸುತ್ತಿದ್ದ ಯಾಕೋ ಮಗಳ ಅಳು ಕಡಿಮೆಯಾಗುವುದು ಕಾಣಿಸದಾದಾಗ ಹಣೆಯಲ್ಲಿ ಬೆವರು ಮತ್ತಿನಂತೆ ಮಡುಗಟ್ಟ ತೊಡಗಿತ್ತು. ಅವಳು ತನ್ನೆದೆಯನ್ನು ಒತ್ತಿ ಹಿಡಿದು ನರಳುತ್ತಿರುವ ಪರಿಯನ್ನು ನೋಡಲಾಗದೆ ನನಗೆ ಕಣ್ಣು ಕತ್ತಲಿಟ್ಟಂತಾಯಿತು,ನಾನು ಖಾದರ್ ಕೈಯನ್ನು ಭದ್ರ ವಾಗಿಡಿದು ನನ್ನ ಮಗಳನ್ನು ಈ ವರ್ತುಲದಿಂದ ಹೇಗಾದರೂ ಪಾರು ಮಾಡಿ ನನ್ನ ಫಾತಿಮಾಳನ್ನು ನನಗಾಗಿ ಉಳಿಸಿಕೊಡು ಖಾದರ್.. ಎಂದವನಲ್ಲಿ ಮೊರೆಯಿಡುತ್ತಿದ್ದೆ ನಾನು..
  ಛೆ.. ಏನಿದು ಹಸನ್ .. ಅವಳಿಗೆ ದುಃಖದ ಭಾರ ತಡೆಯಲಾಗದೆ ಸಣ್ಣ ಅಟ್ಯಾಕ್ ಆಗಿದೆಯಷ್ಟೇ.. ಅವಳ ದಃಖದ ವೇಗವನ್ನು ತಗ್ಗಿಸಲು ಆದಷ್ಟೂ ಪ್ರಯತ್ನ ಪಡು ಅದು ಬಿಟ್ಟು ಇದೇನು ನೀನು ಎಳೇ ಮಗುವಿನ ಹಾಗೆ ಅಳುತ್ತಿರುವುದು..? ಎಂದೇಳುತ್ತಾ ಸಮಾಧಾನಿಸುತ್ತಿದ್ದ ಆತ...ನಾನು ಅವನ ಮಾತನ್ನೇ ಮೆಲುಕು ಹಾಕುತ್ತಾ.. ಮಗಳ ಮೊಗವನ್ನೇ ದೀರ್ಘವಾಗಿ ದಿಟ್ಟಿಸುತ್ತಿದ್ದೆ. ಸಾಗರದ ಅಲೆಗಳಂತೆ ನೂರಾರು ಭಾವನೆಗಳು ಒಮ್ಮೆಲೇ ನನ್ನನ್ನು ಅಪ್ಪಳಿಸಿದಾಗ ಮೆಲ್ಲನೆ ನಡುಗಿ ಹೋದೆ ನಾನು.. ಇನ್ನು ಅವಳ ದುಃಖವನ್ನು ಕಡಿಮೆ ಗೊಳಿಸಳು ನನ್ನಿಂದ ಸಾಧ್ಯವೇ..? ಎತ್ತ ಬೇಕಾದರೂ ಹೊರಳಬಹುದಾದ ಎಲುಬಿಲ್ಲದ ಹಾಳು ನಾಲಗೆ. ಅನೇಕ ಕತೆ ಕಟ್ಟಿ ಹೇಳುತ್ತಿರುವ ಈ ಹಾಳು ಮನುಷ್ಯ ಜನ ನನ್ನ ಮಗಳನ್ನು ಇನ್ನು ಸರಿಯಾಗಿ ಬದುಕಲು ಬಿಡಬಹುದೇ..? ಯಾಕೋ ದಿನ ಪತ್ರಿಕೆ ಗಳಿಗಿಂತ ಬಿರುಸಾಗಿ ಕೆಲಸ ನಿರ್ವಹಿಸುವ ಜನಗಳ ಬಾಯಿ ನನ್ನ ಮಗಳನ್ನು ಸರಿಯಾಗಿ ಬದುಕಲು ಬಿಡಲಾರರೆಂದಿನಿಸಿತು ನನಗೆ..
  ನನ್ನ ಮನದ ತುಂಬಾ ಅಲೆಗಳ ಭೋರ್ಗರೆತ ಇದು ಯಾವ ರೀತಿ ದಡ ಮುಟ್ಟುವುದೋ ಎಂ ತವಕ ಬೇರೆ. ಇಷ್ಟರವರೆಗೆ ನನ್ನ ಕಾಲು ಮಾತ್ರ ತುಂಡಾಗಿತ್ತು, ಆದರೆ ಈಗ ನನ್ನ ಹೃದಯ ಕೂಡಾ ತುಂಡಾಗಿದ್ದಂತಾಯಿತು.ಅದ್ಯಾಕೆ ಎಲ್ಲಾ ವರ್ಗಗಳಿಗಿಂತ ಶ್ರೇಷ್ಟವಾದ ಮನುಷ್ಯ ಇಷ್ಟು ನಿರ್ದಯಿಯಾದ..? ಕೇವಲ ಹಣಕ್ಕಾಗಿ ಮಾತ್ರ ಹೆಣ್ಣು ಹೆತ್ತವರ ಕಣ್ಣೀರಲ್ಲಿ ಈ ರೀತಿ ಆಟವಾಡಲು ಸಾಧ್ಯವೇ..?ಸಾಧ್ಯವಿಲ್ಲವೆಂದೆನಿಸಿತು ನನಗೆ.. ಯವ್ವನದಲ್ಲಿ ಕಂಗೊಳಿಸುವ ಈ ದೇಹ . ಜೀವನ ಮಾಗಿದಂತೆ ಚರ್ಮ ಸುಕ್ಕುಗಟ್ಟಿ ಸಂದರ್ಯ ಕಣ್ಮರೆಯಾದಾಗ. ಕೆಲಸಕ್ಕೆ ಬಾರದ ವಸ್ತುವಿನಂತೆ ಎಸೆಯಲ್ಪಡುವ ಈ ದೇಹ .. ಜಗತ್ತಿನಿಂದೀಚೆಗೆ ಬೆತ್ತಲಾಗಿಯೇ ಬಂದು ಬೆತ್ತಲಾಗಿಯೇ ಕೊನೆಗೊಳ್ಳುತ್ತದೆ. ಮಧ್ಯೆ ಮಾತ್ರ ನೂರೆಂಟು ಆಸೆ ಬಯಕೆ ವ್ಯಾಮೋಹ . ಇದೇಕೆ ಹೀಗೆ..? ಯಾಕೋ ಯೋಚಿಸುತ್ತಾ ಹೋದರೆ ಇದರ ತಲೆ ಬುಡಾನೆ ಅರ್ಥವಾಗುತ್ತಿಲ್ಲ ನನಗೆ.. ನಾನು ದುಃಖದ ಭಾರ ನೀಗಲೆಂದು ಆ ಮನೆಯಿಂದ ಹೊರ ಬಂದು ಬಿರುಸಾಗಿ ಹೆಜ್ಜೆ ಹಾಕುತ್ತಿದ್ದೆ. ಮನ ಪ್ರಶಾಂತತೆಯನ್ನು ಬಯಸಿತ್ತು. ಮತ್ತೊಂದು ಕಡೆ ಮಗಳ ಭವಿಷ್ಯವನ್ನು ನೆನೆದು ನನ್ನೆದೆ ಥರಗುಟ್ಟುತ್ತಿತ್ತು.ಯಾಕೋ ಈ ಊರು.. ಈ ಜನ.. ಈ ಲೋಕ.. ಎಲ್ಲವೂ ಕೃತಕವೆಂದೆನಿಸಿತು ನನಗೆ.
  ದೂರದಲ್ಲಿ ಬಣ್ಣ ಬಣ್ಣದ ಕಾಗದ ಜಗ ಜಗಿಸುವಲೈಟುಗಳು ಕಿವಿಗಡಚ್ಚುವ ಮೈಕ್ ಸಂಡ್ ಗಳೊಡನೆ ವರಧಕ್ಷಿಣೆ ವಿರುದ್ಧ ಭಾಷಣ ಗಳೊಡನೆ ಕೆಂಡ ಕಾರುತ್ತಿದ್ದದ್ದು ಕಾಣಿಸುತಿತ್ತು . ಮನುಷ್ಯನ ಮನಸ್ಸನ್ನು ಅರ್ಥ ಮಾಡಿಕೊಳ್ಳದ ಈ ಜನ .. ದೊಡ್ದ ದೊಡ್ಡ ಭಾಷಣಗಳನ್ನು ಮಾಡಿ ಹೆಸರಿಗಾಗಿ ಅಧಿಕಾರಕ್ಕಾಗಿ ಶಭಾಶ್ ಗಿರಿ ಗಿಟ್ಟಿಸುತ್ತಿದ್ದ ಈ ಜನ .. ಅವರನ್ನು ಅನುಸರಿಸಿ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿದ್ದ ಆ ಉಳಿದ ಜನ ..ಥೂ.. ಧಿಕ್ಕಾರವಿರಲಿ ಇಂತಹಾ ಜನರಿಗೆ.. ಎಂದು ಉಗಿಯ ಬೇಕೆನ್ನಿಸಿತು ನನಗೆ..ಅಲ್ಲಿ ನೆರೆದಿದ್ದ ಜನರನ್ನು ಕಂಡು ನನ್ನೆದೆಯ ಜ್ವಾಲಾಗ್ನಿ ಒಮ್ಮೆಲೇ ಹತ್ತಿ ಉರಿಯ ತೊಡಗಿತ್ತು.ನಾನು ಅವರ ಬಳಿಗೆ ಸರಿಯುತ್ತಾ ಎರಡು ಮುಷ್ಟಿ ತುಂಬಾ ಕಲ್ಲುಗಳನ್ನು ಬಾಗಿ ತೆಗೆದು ತೆಗೆದು ಅವರೆಡೆಗೆ ಎಸೆಯುತಿದ್ದೆ. ಅಷ್ಟರವರೆಗೆ ಭಾಷಣ ಕೇಳುವುದರಲ್ಲಿ ತಲ್ಲೀನರಾಗಿದ್ದ ಜನಗಳು ಈಗ ನನ್ನೆಡೆಗೆ ತಿರುಗಿದರು.
  ಏಯ್.. ಯಾರೋ ಅದು.. ಏಯ್ ಆ ಹುಚ್ಚನನ್ನು ಹಿಡಿಯಿರೋ ತದುಕಿರೋ ಅವನಿಗೆರಡು ಎಂದು ಹೇಳುತ್ತಾ ದೊಣ್ಣೆ ಬಡಿಗೆ ಗಳೊಡನೆ ಓಡಿ ಬರುತ್ತಾ ನನ್ನನ್ನು ಹಿಗ್ಗಾ ಮುಗ್ಗಾ ಥಳಿಸುತ್ತಿದ್ದರು. ನನಗೆ ಅವರ ಸಮಕ್ಕೆ ಹೋರಾಡಲು ಸಾಧ್ಯ ವಿಲ್ಲವೆಂದೆನಿಸಿ ನಾನು ಅವರೆತ್ತರಕ್ಕೆ ನನ್ನ ಸ್ವರ ಏರಿಸುತ್ತಿದ್ದೆ.ಹೌದು ಕಣ್ರೋ ನನಗೆ ಹುಚ್ಚು.. ಹುಚ್ಚು ಹಿಡಿದಿದೆ ನನಗೆ.. ನನ್ನನ್ನು ಹುಚ್ಚನನ್ನಾಗಿ ಪರಿವರ್ತಿಸಿದ ನೀವೂ ಹುಚ್ಚರು... . .ಜನಗಳೆಲ್ಲಾ ನನ್ನನ್ನು ಸುತ್ತು ಗಟ್ಟಿ ನಿಂತಿದ್ದರು . ನಾನು ಮಂಡಿಯೊಳಗೆ ಮುಖ ಹುದುಗಿಸಿ ತಲೆ ಕೆಳಗೆ ಹಾಕಿ ನೆಲವನ್ನು ದಿಟ್ಟಿಸುತ್ತಿದ್ದೆ. ಮತ್ತೊಮ್ಮೆ ನನ್ನನ್ನು ಸುತ್ತು ಗಟ್ಟಿ ನಿಂತಿದ್ದ ಜನರ ಕಡೆಗೆ ದೃಷ್ಟಿ ಹಾಯಿಸಿದೆ.ಆ ಹೃದಯವಿಲ್ಲದ ಜನರನ್ನು ನೋಡಿ ಯಾಕೋ ನನಗೆ ಜೋರಾಗಿ ನಗಬೇಕೆನ್ನಿಸಿತು. ನಾನು ನನಗೆ ಸಾಧ್ಯವಾದಷ್ಟು ಜೋರಾಗಿ ನಗುತ್ತಿದ್ದೆ.ಮತ್ತೊಂದು ಕಡೆ ನನ್ನ ಮಗಳ ಭವಿಷ್ಯ ಅಂತರಾಳದಲ್ಲಿ ಚುಚ್ಚುತಿತ್ತು. ಮಗಳ ಭವಿಷ್ಯವನ್ನು ನೆನೆದು ನನಗೆ ಜೋರು ದುಃಖ ವುಮ್ಮಳಿಸಿ ಬರುತಿತ್ತು.ನಾನು ನನ್ಗೆ ಸಾಧ್ಯವಾದಷ್ಟು ಜೋರು ಧ್ವನಿಯಲ್ಲಿ ಅಳುತ್ತಿದ್ದೆ.
  ಈಗ ನನ್ನನ್ನು ಸುತ್ತು ಗಟ್ಟಿದ್ದ ಜನ ತ್ಚು.. ತ್ಚು..ತ್ಚು.. ಪಾಪ.. ನಿಜವಾಗಿಯೂ ಇವನಿಗೆ ಹುಚ್ಚು ಹಿಡಿದಿದೆ ಕಣ್ರೋ ಎಂದು ಹೇಳುತ್ತಾ ನನ್ನಿಂದ ಸರಿದು ಹೋಗುತಿದ್ದರು. ನಾನು ಮಾತ್ರ ಆ ನಿರ್ಜನ ಜಾಗದಲ್ಲಿ ಶೂನ್ಯಕ್ಕೆ ದೃಷ್ಟಿ ನೆಟ್ಟು ಕುಳಿತಿದ್ದೆ. ನನ್ನ ಮಗಳ ಕರಾಳ ಬದುಕಿನೊಂದಿಗೆ ನನ್ನನ್ನೂ ವಿಲೀನಗೊಳಿಸುತ್ತಾ... . . . . . . ;
  posted by ASHRAF @ 5:22 AM  
  1 Comments:
  • At July 23, 2009 at 3:40 AM, Blogger ASHRAF said…

   sunaath ಹೇಳಿದರು...
   ನೇರದಾರಿಯಲ್ಲಿ ನೀವು ಬರೆದ ಕತೆಯ ಬಗೆಗೆ:
   ಬೋಳುವಾರ ಮೊಹಮ್ಮದ ಕುಂಯಿ, ಮೊಹಮ್ಮದ ಕಟ್ಪಾಡಿ ಹಾಗೂ
   ಸಾರಾ ಅಬೂ ಬಕ್ಕರ ಇವರು ಮುಸ್ಲಿಮ್ ಸಮುದಾಯದ ಜೀವನದ ಬಗೆಗೆ ಕನ್ನಡದಲ್ಲಿ ಒಳ್ಳೆಯ ಸಾಹಿತ್ಯ ನೀಡಿದ್ದಾರೆ. ನೀವೂ ಈ ಸಾಲಿನಲ್ಲಿ ಸೇರಬಹುದು ಎಂದು ಅನಿಸುತ್ತದೆ.
   ನೇರದಾರಿಯಲ್ಲಿ comment post ಮಾಡಲು ಆಗುತ್ತಿಲ್ಲ. ಅದಕ್ಕಾಗಿ ಇಲ್ಲಿ ಮಾಡಿದ್ದೇನೆ

    

  Post a Comment

  << Home
   
  About Me

  Name: ASHRAF
  Home: India
  About Me: ಅಸ್ಸಲಾಮ್ ಅಲೈಕುಮ್
  See my complete profile
  Previous Post
  Archives
  ನಾ ಬರೆದದ್ದು
  Powered by

  BLOGGER

  Older Posts
  © 2005 ನೇರದಾರಿ Blogger Templates by Isnaini and Cool Cars Pictures